ಬೆಂಗಳೂರು: ರಾಜರಾಜೇಶ್ವರಿನಗರ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕುಸುಮಾ ಹೆಚ್ ಜಂಟಿಯಾಗಿ ಪ್ರಚಾರ ನಡೆಸಿ ಮತಯಾಚಿಸಿದರು.
ಈ ವೇಳೆ ಡಿ ಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡುವುದು ಎಂದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ. ಮುನಿರತ್ನಗೆ ನೀವು ನಾವು ಯಾರಾದರೂ ಬಿಜೆಪಿಗೆ ಹೋಗು ಅಂತಾ ಪರ್ಮಿಷನ್ ಕೊಟ್ಟಿದ್ವಾ? ಯಾರನ್ನೂ ಕೇಳದೆ ಹಣ ಪಡೆದುಕೊಂಡು ಹೋಗಿದ್ದಾರೆ. ಜನರನ್ನು ಒಂದು ಮಾತು ಕೇಳದೆ ಹೋಗಿರುವ ಶಾಸಕರು ಮತ್ತೆ ಯಾಕೆ ಶಾಸಕರು ಆಗಬೇಕು? ಈ ಸರ್ಕಾರದಿಂದ ಜನರಿಗೆ ಯಾವುದೇ ಅನುಕೂಲ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೊರೊನಾ ಸಂದರ್ಭದಲ್ಲಿ ಕೂಡ ಜನರನ್ನು ಅವರು ಊರುಗಳಿಗೆ ಉಚಿತವಾಗಿ ಕಳಿಸಿಕೊಡಬೇಕೆಂದು ನಾವೇ ಆಗ್ರಹಿಸಿದ್ದೆವು. ನಿಮಗೆ ಯಾವುದೇ ಸಮಸ್ಯೆ ಬಂದರೂ ನಿಮ್ಮ ಬೆನ್ನಿಗೆ ನಿಲ್ಲಲು ನಾನು ಸಿದ್ಧನಿದ್ದೇನೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವ ಕಾರ್ಯ 6 ತಿಂಗಳ ಹಿಂದೆಯೇ ಮುಗಿದುಹೋಗಿದೆ. ನಿಮ್ಮ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗಲು ಕೇವಲ ಡಿ.ಕೆ ಸುರೇಶ್ ಅಂತಾ ಸಂಸದರು ಮಾತ್ರ ಅಲ್ಲ ಶಾಸಕರೊಬ್ಬರನ್ನು ನೇಮಿಸಲು ಮುಂದಾಗಿದ್ದೇನೆ. ನಾವು ನಿಮಗೆ ರಕ್ಷಣೆ ನೀಡಲು ಬಂದಿದ್ದೇವೆ, ಯಾವುದೇ ಆತಂಕ ಬೇಡ ಎಂದಿದ್ದಾರೆ.
ಬಳಿಕ ಮಾತನಾಡಿದ ಅಭ್ಯರ್ಥಿ ಕುಸುಮ, ನಾನು ನಿಮ್ಮ ಮನೆಮಗಳು. ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ನಿಮ್ಮ ಮಗಳಾಗಿ ನಾನು ಸದಾ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಿರುತ್ತೇನೆ. ನೀವು ಕೊಡುವ ಅವಕಾಶವನ್ನು ಬಳಸಿಕೊಂಡು ಪ್ರಾಮಾಣಿಕತೆ, ಶ್ರದ್ಧೆಯಿಂದ ಕೆಲಸ ಮಾಡಿ ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಮತಯಾಚಿಸಿದ್ದಾರೆ.
ನೀವು ಕೊಡುವ ಅವಕಾಶ ಪ್ರೋತ್ಸಾಹವನ್ನು ಹಣ ಅಥವಾ ಅಧಿಕಾರದ ಆಸೆಗೆ ಮಾರಿಕೊಳ್ಳುವುದಿಲ್ಲ. ನವೆಂಬರ್ 3ರಂದು ನಡೆಯುವ ಚುನಾವಣೆಯಂದು ಕ್ರಮ ಸಂಖ್ಯೆ 1, ಹಸ್ತದ ಗುರುತಿಗೆ ನಿಮ್ಮ ಮತ ನೀಡಿ ಮನೆ ಮಗಳಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದಾರೆ.