ಬೆಂಗಳೂರು: ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆಯು ಜನ್ಮನೀಡಿದ ತಾಯಿಗೆ ದ್ರೋಹ ಮಾಡಿದಂತೆ. ಪಕ್ಷದ ಎಲ್ಲ ಪ್ರಮುಖ ಅವಕಾಶಗಳು ಅವರಿಗೆ ಸಿಕ್ಕಿತ್ತು. ಈಗ ಕಾಂಗ್ರೆಸ್ ಸರಿಯಿಲ್ಲ ಅಂತ ಹೇಳುತ್ತಿದ್ಧಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಗುಲಾಂ ನಬಿ ಆಜಾದ್ ರಾಜೀನಾಮೆ ಅಶ್ಚರ್ಯಕರ ಸುದ್ದಿ. ಉಪಕಾರ ಸ್ಮರಣೆ ಇಲ್ಲದೆ ಹೋದವರು. 50 ವರ್ಷ ಎಲ್ಲ ಹುದ್ದೆ ಅನುಭವಿಸಿದರು. ದೇಶ ಕಷ್ಟದಲ್ಲಿರುವಾಗ ನಾವು ಹೋರಾಡುತ್ತಿದ್ದೇವೆ. ಇತ್ತೀಚಿಗೆ 600 ಜನ ನಾಯಕರು ಚರ್ಚೆ ಮಾಡಿದ್ದೆವು. ದೇಶ ಉಳಿಸುವ ತೀರ್ಮಾನ ತೆಗೆದುಕೊಂಡಿದ್ದೆವು. ಇದರಲ್ಲಿ ಗುಲಾಂ ನಬಿ ಅಜಾದ್ ಕೂಡ ಇದ್ದರು. ಇವತ್ತು ರಾಜೀನಾಮೆ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಗುಲಾಂ ಅವರ ನಡೆಗೆ ಏನನ್ನಬೇಕು?. ಯಾವುದಾದರೂ ಕಾರಣ ಕೊಟ್ಟಿದ್ದರೆ ಒಪ್ಪಬಹುದಿತ್ತು. ಕಾರಣವಿಲ್ಲದೆ ರಾಜೀನಾಮೆ ಕೊಟ್ಟಿದ್ದಾರೆ. ಪಕ್ಷ ಕಟ್ಟಲು ಅವರು ಮಾರ್ಗದರ್ಶನ ನೀಡಬೇಕಿತ್ತು. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರಿಗೆ ಹೆಸರು ತಂದುಕೊಟ್ಟಿದ್ದು ಕಾಂಗ್ರೆಸ್. ಸಿಎಂ, ಪ್ರತಿಪಕ್ಷ ನಾಯಕ, ಪ್ರಧಾನ ಕಾರ್ಯದರ್ಶಿ ಎಲ್ಲವೂ ಕೊಟ್ಟಿದೆ. ಪಕ್ಷದ ಎಲ್ಲ ಪ್ರಮುಖ ಅವಕಾಶ ಅವರಿಗೆ ಸಿಕ್ಕಿತ್ತು. ಈಗ ಕಾಂಗ್ರೆಸ್ ಸರಿಯಿಲ್ಲ ಅಂತ ಹೇಳುತ್ತಿದ್ದಾರೆ. ರಾಹುಲ್ ರಾಜೀನಾಮೆ ಕೊಟ್ಟಿದ್ದರು. ಆಗಲೇ ನೀವು ಪ್ರಶ್ನಿಸಬಹುದಿತ್ತಲ್ಲ. ಇವತ್ತಿನವರೆಗೆ ಯಾಕೆ ನೀವು ಸುಮ್ಮನೆ ಕುಳಿತಿದ್ರಿ ಎಂದೂ ಪ್ರಶ್ನಿಸಿದರು.
ನಿಮಗೆ ಕೊಡಲು ಇನ್ನೇನು ಉಳಿದುಕೊಂಡಿತ್ತು. ಗಾಂಧಿ ಕುಟುಂಬ ನಿಮಗೆ ಎಲ್ಲವನ್ನೂ ಕೊಟ್ಟಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯವರೆಗೆ ಸ್ಥಾನ ಕೊಟ್ಟಿದೆ. ನಿಮಗೆ ಇನ್ನಾವ ಸ್ಥಾನ ಬಾಕಿ ಇತ್ತು?. ಇದು ನಿಮ್ಮ ಹಿರಿತನಕ್ಕೆ ಗೌರವ ತರಲ್ಲ. ಇದೊಂದು ದುರದೃಷ್ಟಕರ ನಿಲುವು. ನೀವು ಎಲ್ಲರಿಗೆ ಮಾದರಿಯಾಗಬೇಕಿತ್ತು. ಯುವಕರಿಗೆ ಮಾರ್ಗದರ್ಶನ ಮಾಡಬೇಕಿತ್ತು. ಸೋನಿಯಾ ಗಾಂಧಿಯವರ ಆರೋಗ್ಯ ಸರಿಯಿಲ್ಲ. ಇಂತಹ ವೇಳೆ ನೀವು ಕೊಟ್ಟಿದ್ದು ಸರಿಯಲ್ಲ. ನಿಮ್ಮಂತವರು ಪಕ್ಷ ಮುಳುಗಿಸೋಕೆ ಸಾಧ್ಯವಿಲ್ಲ. ಬರುವವರು ಬರಬಹುದು, ಹೋಗಬಹುದು. ಆದರೆ ಪಕ್ಷವನ್ನ ಯಾರೂ ಮುಳುಗಿಸೋಕೆ ಆಗಲ್ಲ ಎಂದರು.
ನಮ್ಮದು ಚಿಕ್ಕ ಕಾರ್ಯಕರ್ತರ ಪಕ್ಷ. ನಮಗೆ ಏನು ಸಿಕ್ಕಿದ್ರೂ ಪಕ್ಷದಿಂದ ಮಾತ್ರ. ನಮ್ಮ ಸ್ವಾರ್ಥ ಬಿಟ್ಟು ದೇಶ ಮುನ್ನಡೆಸಬೇಕು. ಕಷ್ಟಕಾಲದಲ್ಲಿ ದೇಶವನ್ನ ಉಳಿಸಬೇಕು. ಆದರೆ ನೀವು ಮಾಡಿದ್ದು ಸರಿಯಲ್ಲ. ಎಲ್ಲವನ್ನೂ ತಡೆದುಕೊಳ್ಳುವ ಶಕ್ತಿ ಪಕ್ಷಕ್ಕಿದೆ. ಇನ್ನು ಏನೇ ದುರ್ಘಟನೆ ಆದ್ರೂ ಪಕ್ಷ ಮತ್ತಷ್ಟು ಬೆಳೆಯಲಿದೆ. ದೇಶದ ಐಕ್ಯತೆಯನ್ನು ಜನ ಬಯಸ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಗುಲಾಬ್ ನಬಿ ರಾಜೀನಾಮೆಯಿಂದ ಕೋಮುವಾದಿ ಶಕ್ತಿಗಳಿಗೆ ಪರೋಕ್ಷ ಸಹಕಾರ: ಖರ್ಗೆ