ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಎಂದರೆ ಅದು ದೇಶದ ಐತಿಹಾಸಿಕ ಘಟ್ಟ. ಇದು ದೇಶದ ಹಬ್ಬ. ಇದನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಬೇರೆ ಪಕ್ಷದ ನಾಯಕರು ಏನೇ ಮಾತನಾಡಲಿ, ಎಷ್ಟಾದರೂ ಟೀಕೆ ಮಾಡಲಿ. ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಉದಯಪುರ ಚಿಂತನಾ ಶಿಬಿರದಲ್ಲಿ ಪಕ್ಷದ ನಾಯಕರೆಲ್ಲರೂ ಸೇರಿ ಈ ಅಮೃತ ಮಹೋತ್ಸವ ಆಚರಣೆ ಕುರಿತು ತೀರ್ಮಾನ ತೆಗೆದುಕೊಂಡೆವು. ಸಂಗೊಳ್ಳಿ ರಾಯಣ್ಣ ವೃತ್ತದಿಂದ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಕೊಂಡಿರುವವರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರಿದ್ದಾರೆ. ಇವರ ಜತೆಗೆ ಕಾಂಗ್ರೆಸ್ ಕಾರ್ಯಕರ್ತರೂ ಸೇರಲಿದ್ದಾರೆ. ಎಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮೇತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಯ ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹರಿಹರನ್ ಅವರ ತಂಡದಿಂದ ದೇಶಭಕ್ತಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಲಾವಿದರು, ಸಾಹಿತಿಗಳು ಸೇರಿದಂತೆ ಎಲ್ಲ ರಂಗದವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಗಾಂಧೀಜಿ ಹೇಗೆ ಹೆಜ್ಜೆ ಹಾಕಿದರೋ ಅದೇ ರೀತಿ ನೀವೂ ಹೆಜ್ಜೆ ಹಾಕಿ ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮಕ್ಕೆ ದೆಹಲಿಯಿಂದ ಯಾವ ನಾಯಕರು ಬರುತ್ತಾರೆ ಎಂಬ ಪ್ರಶ್ನೆಗೆ, ನಾವು ರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಿದ್ದೇವೆ. ರಾಹುಲ್ ಗಾಂಧಿ ಅವರು ಇಂದು ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ನನಗೆ ಬಂದ ಮಾಹಿತಿ ಪ್ರಕಾರ ಪ್ರಿಯಾಂಕಾ ಗಾಂಧಿ ಅವರ ಆರೋಗ್ಯವೂ ಸರಿಯಿಲ್ಲ. ಈ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ ಎಂದು ಅವರೇ ತೀರ್ಮಾನಿಸುತ್ತಾರೆ. ಇದು ಎಐಸಿಸಿ ಕೊಟ್ಟಿರುವ ದೇಶದ ಕಾರ್ಯಕ್ರಮ ಎಂದು ಹೇಳಿದರು.
ಸ್ವಾತಂತ್ರ್ಯ ನಮ್ಮ ಕೊಡುಗೆ: ನಿಮ್ಮ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಬಿಜೆಪಿ ಕಾರ್ಯಕ್ರಮ ರೂಪಿಸಿದೆಯೇ ಎಂಬ ಪ್ರಶ್ನೆಗೆ, ನಾವು ನಮ್ಮ ಕಾರ್ಯಕ್ರಮ ರೂಪಿಸಿದ ನಂತರ ಬಿಜೆಪಿ ವಿವಿಧ ರೀತಿ ಕಾರ್ಯಕ್ರಮ ಘೋಷಣೆ ಮಾಡಿದೆ. ಅವರು, ದಳದವರು, ಇತರೆ ಪಕ್ಷದವರು ಏನೇ ಮಾಡಲಿ. ನಾವು ಅದರ ಬಗ್ಗೆ ಟೀಕೆ ಮಾಡುವುದಿಲ್ಲ. ಆರೋಗ್ಯಕರ ಸ್ಪರ್ಧೆ ಇರಲಿ. ದೇಶಕ್ಕೆ ಎಲ್ಲರೂ ಗೌರವ ನೀಡಲಿ. ಸ್ವಾತಂತ್ರ್ಯದ ವಿಚಾರದಲ್ಲಿ ನಮಗಿರುವ ಹಕ್ಕು, ನೈತಿಕತೆ ಅವರಿಗಿಲ್ಲ ಎಂದು ಡಿಕೆಶಿ ಹೇಳಿದರು.
ಇದನ್ನೂ ಓದಿ: ವಾರ್ಷಿಕೋತ್ಸವದ ಸಂಭ್ರಮದ ಹೊತ್ತಲ್ಲಿ ಬೊಮ್ಮಾಯಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ: ಕಾಂಗ್ರೆಸ್ ಟೀಕೆ