ಬೆಂಗಳೂರು: ಕೊರೊನಾ ವಿಚಾರವಾಗಿ ಸರ್ವಪಕ್ಷ ಸಭೆ ಬಗ್ಗೆ ರಾಜ್ಯಪಾಲರ ಕಚೇರಿಯಿಂದ ಆಹ್ವಾನ ಬಂದಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕೊರೊನಾ ಪರಿಸ್ಥಿತಿ ನಿರ್ವಹಣೆ ಸಂಬಂಧ ರಾಜ್ಯ ಸರ್ಕಾರ ಇವತ್ತು ಸಭೆ ನಡೆಸಿದ್ದು, ರಾಜ್ಯಪಾಲರು ನಾಳೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಗೆ ರಾಜ್ಯಪಾಲರ ಕಚೇರಿಯಿಂದ ಆಹ್ವಾನ ಬಂದಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ ಎಂದರು.
ಇದೇ ಮೊದಲ ಬಾರಿಗೆ ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿದ್ದು, ಮುಂದಿನ ದಿನಗಳಲ್ಲಿ ರಾಜ್ಯಪಾಲರ ಆಳ್ವಿಕೆ ಅಧಿಕೃತವಾಗಿ ಜಾರಿಯಾಗುವ ಲಕ್ಷಣ ಗೋಚರಿಸುತ್ತಿದೆ. ನಾಳೆ ನಾವು ಸಭೆಯಲ್ಲಿ ಭಾಗವಹಿಸುತ್ತೇವೆ. ಕೊರೊನಾ ವಾಸ್ತವಾಂಶದ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದು, ನಾಳೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇವೆ.
ಕೊರೋನಾ ಲಸಿಕೆ ಪೂರೈಕೆ ಗುತ್ತಿಗೆಯನ್ನು ಕೇವಲ ಎರಡು ಕಂಪನಿಗಳಿಗೆ ಯಾಕೆ ನೀಡಲಾಗಿದೆ? ಆರೋಗ್ಯ ಕ್ಷೇತ್ರಕ್ಕೆ 30 ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕು. ಎಲ್ಲ ಅಭಿವೃದ್ಧಿ ಕೆಲಸ ನಿಲ್ಲಿಸಿ. ಈ ವಿಚಾರದ ಬಗ್ಗೆ ಗಮನ ಹರಿಸಿ. ಎಲ್ಲರಿಗೂ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕು. ಆದರೆ ಈವರೆಗೂ ಯಾವುದೇ ಸಿದ್ಧತೆ ಆಗಿಲ್ಲ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.