ಬೆಂಗಳೂರು: ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಮುಖಂಡರ ಸಭೆ ಕರೆದಿದ್ದಾರೆ.
ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಾ.20 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಎಲ್ಲಾ ಸಂಸದರು, ಶಾಸಕರುಗಳು, ಹಿರಿಯ ಮುಖಂಡರುಗಳು ಹಾಗೂ ಕೆಪಿಸಿಸಿ ವೀಕ್ಷಕರ ಸಭೆಯನ್ನು ಕರೆಯಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಹಿಸಲಿದ್ದಾರೆ.
ಸದರಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್.ಅರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಹಿರಿಯ ಮುಖಂಡರುಗಳು, ಸಿ.ಡಬ್ಯು.ಸಿ. ಸದಸ್ಯರು ಮತ್ತು ಎಐಸಿಸಿಯ ವೀಕ್ಷಕರುಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಪಕ್ಷ ಕಳೆದುಕೊಂಡಿರುವ 2 ಕ್ಷೇತ್ರಗಳನ್ನು ಮರಳಿ ಪಡೆಯುವ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಬಿಜೆಪಿಯಿಂದ ಕಿತ್ತುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಅತ್ಯಂತ ಪ್ರಮುಖವಾಗಿ ಸೀಮಿತ ಅವಧಿಯಲ್ಲಿ ಮೂರು ಕ್ಷೇತ್ರಗಳನ್ನು ಸಮರ್ಥವಾಗಿ ನಿಭಾಯಿಸಿ ಪ್ರಚಾರ ಕಾರ್ಯ ಕೈಗೊಳ್ಳುವ ಸಂಬಂಧ ಚರ್ಚೆ ನಡೆಯಲಿದೆ. ಪ್ರಚಾರದ ಉಸ್ತುವಾರಿ ವಹಿಸುವ, ರಾಜ್ಯ ನಾಯಕರ ಪ್ರವಾಸದ ಪಟ್ಟಿ ಸಿದ್ಧಪಡಿಸುವ, ಅಭ್ಯರ್ಥಿಗಳನ್ನು ಘೋಷಿಸಿ ಪಕ್ಷದ ಕಾರ್ಯಕರ್ತರಿಗೆ ಅವರ ಪರವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸುವ ಹಾಗೂ ಇನ್ನಿತರ ಹಲವು ಮಹತ್ವದ ವಿಚಾರಗಳ ಕುರಿತು ಈ ಸಂದರ್ಭ ಚರ್ಚೆ ನಡೆಯಲಿದೆ. ಪಕ್ಷದ ಹಿರಿಯ ನಾಯಕರೆಲ್ಲ ಪಾಲ್ಗೊಂಡು ಒಂದು ಒಮ್ಮತದ ನಿರ್ಧಾರಕ್ಕೆ ಬರಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಪಕ್ಷಕ್ಕೆ ಮೊದಲ ಗೆಲುವು ತಂದುಕೊಡುವ ತವಕದಲ್ಲಿರುವ ಡಿಕೆ ಶಿವಕುಮಾರ್ ಉಪಚುನಾವಣೆಯನ್ನು ಸಹ ಅತ್ಯಂತ ಪ್ರಮುಖವಾಗಿ ಪರಿಗಣಿಸಿದ್ದಾರೆ.
ಇದನ್ನುಓದಿ:ಕರ್ನಾಟಕ ಉಪಚುನಾವಣೆ: ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಇವರು..