ಬೆಂಗಳೂರು: ದಿನೇ ದಿನೆ ಆರ್ಆರ್ ನಗರ ಉಪಚುನಾವಣೆ ಕಣ ರಂಗೇರುತ್ತಿದ್ದು, ಕಾಂಗ್ರೆಸ್ ಪಕ್ಷ ತನ್ನ ಪ್ರಚಾರ ಕಾರ್ಯ ಮುಂದುವರಿಸಿದೆ. ಇಂದು ಮಧ್ಯಾಹ್ನದಿಂದ ಪೀಣ್ಯ ಹಾಗೂ ಗೋರಗುಂಟೆಪಾಳ್ಯದ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಪಕ್ಷದ ಅಭ್ಯರ್ಥಿ ಕುಸುಮ ಭೇಟಿ ನೀಡಿ ಪ್ರಚಾರ ನಡೆಸಿ, ನೌಕರರ ಕುಂದು ಕೊರತೆಗಳನ್ನು ನಿವಾರಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆ.
ಪೀಣ್ಯ ಮತ್ತು ಗೋರಗುಂಟೆಪಾಳ್ಯದ ಟೆಸ್ಪೋರ್ಟ್ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದ ಡಿಕೆಶಿ, ಕುಸಮಾ ಒಬ್ಬ ವಿದ್ಯಾವಂತ ಪ್ರಜ್ಞಾವಂತ ಹೆಣ್ಣು ಮಗಳು, ಸಂಸಾರದಲ್ಲಿ ತುಂಬಾ ನೊಂದು, ನೋವು ಅನುಭವಿಸಿದ್ದಾರೆ ನಿಮ್ಮ ಸೇವೆಯಲ್ಲಿ ಅವುಗಳನ್ನು ಮರೆಯಬೇಕು ಅಂತ ನಿಮ್ಮ ಮುಂದೆ ಬಂದಿದ್ದಾರೆ ಅವರಿಗೆ ನಿಮ್ಮ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಿಮ್ಮ ಪರ ಧ್ವನಿಯಾಗಬೇಕೆಂಬ ಕಾರಣಕ್ಕೆ ನಾವು ಕಾಂಗ್ರೆಸ್ ಪಕ್ಷದಿಂದ ಕುಸುಮಾಗೆ ಟಿಕೆಟ್ ಕೊಟ್ಟಿದ್ದು, ಅವರ ಜೊತೆ ನಾವಿದ್ದೇವೆ ಎಂದರು. ಇದೇ ವೇಳೆ, ನೀವು ಗಾರ್ಮೆಂಟ್ಸ್ನಲ್ಲಿ ತಯಾರಿಸಿದ ಬಟ್ಟೆ ಉತ್ತಮವಾಗಿದ್ದು ನಾನು ಗಮನಿಸಿದೆ, ಇವೆಲ್ಲ ವಿದೇಶಕ್ಕೆ ರಫ್ತಾಗುತ್ತಿರುವುದು ಸಂತೋಷ ಆಯಿತು, ನಿಮಗೆ ಒಳ್ಳೆಯದಾಗಲಿ ಎಂದು ಉದ್ಯೋಗಿಗಳಿಗೆ ಹಾಗೂ ಮಾಲೀಕರಿಗೆ ಅಭಿನಂದಿಸಿದರು.
ಇದೇ ವೇಳೆ ಮಾತನಾಡಿದ ಕುಸುಮಾ, ಗಾರ್ಮೆಂಟ್ಸ್ನಲ್ಲಿ ಹೆಣ್ಣುಮಕ್ಕಳು ಶೇ80 ರಿಂದ 90 ರಷ್ಟು ಇದ್ದು ನಿಮ್ಮ ಸಮಸ್ಯೆಗಳ ಧ್ವನಿಯಾಗಿ, ನಿಮ್ಮ ಸಹೋದರಿಯಾಗಿ, ಮನೆಮಗಳಾಗಿ ನಾನು ಇರುತ್ತೇನೆ. ಪ್ರಾಮಾಣಿಕವಾಗಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ಸರ್ಕಾರಿ ಸವಲತ್ತುಗಳನ್ನು ನೇರವಾಗಿ ತಲುಪಿಸುವ ಕೆಲಸ ಮಾಡುತ್ತೇನೆ ಎಂದರು.