ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಸೋಮವಾರ ದೆಹಲಿಯಲ್ಲಿ ರಾಜ್ಯದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕರ್ನಾಟಕದಿಂದ ಕೇಂದ್ರ ಸಂಪುಟ ಪ್ರತಿನಿಧಿಸುವ ಸಚಿವರಾದ ಡಿ.ವಿ. ಸದಾನಂದಗೌಡ ಮತ್ತು ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿದ ಡಿ.ಕೆ. ಸಹೋದರರು, ಕೃಷ್ಣ, ಮಹದಾಯಿ, ಮೇಕೆದಾಟು ಸೇರಿದಂತೆ ರಾಜ್ಯದ ಯೋಜನೆಗಳಿಗೆ ಅನುಮತಿ ಕೊಡಿಸಲು ನೆರವಾಗುವಂತೆ ಮನವಿ ಮಾಡಿದರು.
ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಕೃಷ್ಣ ಜಲವಿವಾದ-ll, ಮೇಕೆದಾಟು ಸಮತೋಲನ ಅಣೆಕಟ್ಟು ಯೋಜನೆ, ಮಹದಾಯಿ ಕುಡಿಯುವ ನೀರು ಯೋಜನೆ ಹಾಗೂ ವಿದ್ಯುತ್ ಉತ್ಪಾದನೆ ಯೋಜನೆಗಳಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸದಾನಂದಗೌಡರಲ್ಲಿ ಮನವಿ ಮಾಡಿದರು.
ಇನ್ನು ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳ ಕಾಮಗಾರಿ ಚುರುಕುಗೊಳಿಸುವುದು, ಬೆಂಗಳೂರು ರೈಲ್ವೆ ನಿಲ್ದಾಣ ಅಭಿವೃದ್ಧಿ, ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ ಸಂಬಂಧ ಚರ್ಚೆ ನಡೆಸಿದರು.