ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕೃತವಾಗಿ ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಎಂಟ್ರಿ ಕೊಟ್ಟಿದ್ದು, ಗಲಭೆಯ ಬಗ್ಗೆ ಮಾಹಿತಿ ಕಲೆ ಹಾಕಿದೆ.
ಗಲಭೆಯಲ್ಲಿ ಸಾವನ್ನಪ್ಪಿದ ಮೂವರು ವ್ಯಕ್ತಿಗಳ ಪ್ರಕರಣ ಹಾಗೂ ಮೃತರ ಹಿನ್ನೆಲೆ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಇಟ್ಟ ಆರೋಪಿಗಳ ಹಿನ್ನೆಲೆ, ಹಾಗೆ ಈಗಾಗಲೇ ಬಂಧಿತರಾಗಿರುವ ಎಸ್ಡಿಪಿಐ ಸಂಘಟನೆ ಸದಸ್ಯರ ಮಾಹಿತಿಯನ್ನ ಕಲೆ ಹಾಕಿ ಎನ್ಐಎ ತನಿಖೆ ನಡೆಸುತ್ತಿದೆ. ಸದ್ಯ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳಿಂದ ಕೂಡ ಎನ್ಐಎ ಬಹುತೇಕ ಮಾಹಿತಿ ಪಡೆದಿದೆ. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಹಾಗೂ ಡಿ.ಜೆ. ಹಳ್ಳಿ ಪೊಲೀಸರು ಆರೋಪಿಗಳ ಪ್ರಾಥಮಿಕ ಮಾಹಿತಿಯನ್ನು ಎನ್ಐಎಗೆ ನೀಡಿದ್ದಾರೆ.
ಪ್ರಕರಣದ ಹಿಂದೆ ಎಸ್ಡಿಪಿಐನ ಕೆಲ ಕಾರ್ಯಕರ್ತರು, ಪ್ರಮುಖರು ಇದ್ದಾರೆ ಎಂಬ ಆರೋಪ ಹಿನ್ನೆಲೆ ಭಯೋತ್ಪಾದಕಕರ ನಂಟಿನ ಬಗ್ಗೆ ಎನ್ಐಎ ಮಾಹಿತಿ ಕಲೆ ಹಾಕುತ್ತಿದೆ. ಎನ್ಐಎ ಗಲಭೆ ವೇಳೆ ನಡೆದ ಕೆಲ ಸಿಸಿಟಿವಿಗಳ ಪರಿಶೀಲನೆಯನ್ನ ಮಾಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 380ಕ್ಕೂ ಹೆಚ್ಚು ಜನ ಬಂಧಿತರಾಗಿದ್ದು, ಪ್ರತಿಯೊಬ್ಬರ ಹಿನ್ನೆಲೆ ಕಲೆ ಹಾಕಲಾಗಿದೆ.
ಇಷ್ಟು ದಿನ ಸಿಸಿಬಿ ಮಾತ್ರ ಪ್ರಕರಣದ ತನಿಖೆ ನಡೆಸುತ್ತಿತ್ತು. ಆದರೆ ಇನ್ಮುಂದೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಗೆ ಎನ್ಐಎ ಆತಂಕ ಎದುರಾಗಿದೆ. ಹಾಗೆ ಮಾಜಿ ಮೇಯರ್ ಸಂಪತ್ತ್ ರಾಜ್ ಸದ್ಯ ತನಗೆ ಕೊರೊನಾ ಇದೆ ಎಂಬ ಸಂದೇಶ ರವಾನಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಘಟನೆಯಲ್ಲಿ ಇವರ ಪಾತ್ರ ಪ್ರಮುಖವಾಗಿರುವ ಕಾರಣ ಸಿಸಿಬಿ ಪೊಲೀಸರು ಕೊರೊನಾದಿಂದ ಸಂಪತ್ರಾಜ್ ಚೇತರಿಸಿಕೊಂಡ ತಕ್ಷಣ ವಿಚಾರಣೆಗೆ ಒಳಪಡಿಸಲಿದ್ದಾರೆ. ಹಾಗೆ ಇವರ ಹೇಳಿಕೆಯಾಧಾರದ ಮೇರೆಗೆ ಎನ್ಐಎ ಅವಶ್ಯಕತೆ ಬಿದ್ರೆ ಸಂಪತ್ ರಾಜ್ ಅವರ ವಿಚಾರಣೆ ನಡೆಸುವ ಸಾಧ್ಯತೆಯಿದೆ.