ಬೆಂಗಳೂರು: ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿಯಲ್ಲಿ ಪರಿಹಾರ ಪಡೆದುಕೊಂಡಿದ್ದರೂ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ ಅಡಿಯಲ್ಲಿ ಪತ್ನಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಹಿಂದು ವಿವಾಹ ಕಾಯಿದೆ ಸೆಕ್ಷನ್ 24 ಅಡಿಯಲ್ಲಿ 30 ಸಾವಿರ ರೂ.ಗಳನ್ನು ಪರಿಹಾರ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಿರಣ್(ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಎರಡೂ ಕಾಯಿದೆಗಳ ಅಡಿಯಲ್ಲಿ ಪ್ರತ್ಯೇಕ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಕೌಟುಂಬಿಕ ನ್ಯಾಯಾಲಯಲ್ಲಿನ ಆದೇಶದಲ್ಲಿ, ಅರ್ಜಿದಾರರ ಆದಾಯ, ಅವರು ಸೇವೆ ಸಲ್ಲಿಸುತ್ತಿರುವುದು ಹಾಗೂ ಪತ್ನಿ ಕೆಲಸ ಬಿಟ್ಟು ಮನೆಯಲ್ಲಿರ ಕುರಿತು ಪರಿಶೀಲನೆ ಮಾಡಲಿದೆ. ಹೀಗಾಗಿ ಅರ್ಜಿದಾರರು ಪರಿಹಾರವನ್ನು ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.ಅಲ್ಲದೆ, ಪತ್ನಿಯಾದವರು ವಿಚ್ಛೇದನ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಉದ್ದೇಶ ಪೂರ್ವಕವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಅರ್ಜಿದಾರರಿಗೆ ತೊಂದರೆ ನೀಡುವ ಮನಸ್ಥಿತಿ ಇದೆ ಎಂಬ ಆರೋಪವನ್ನು ಕೌಟುಂಬಿಕ ನ್ಯಾಯಾಲಯ ಪರಿಶೀಲಿಸಲಿದೆ ಎಂದು ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮಹಿಳೆಯರ ರಕ್ಷಣೆ ಮತ್ತು ಕೌಟುಂಬಿಕ ಕಲಹಗಳಿಂದ ಮಹಿಳೆಯರ ರಕ್ಷಣೆ ಕಾಯಿದೆ 2005ರ ಸೆಕ್ಷನ್ 12ರ ಅಡಿಯಲ್ಲಿ ನಿರ್ವಹಣಾ ವೆಚ್ಚದಲ್ಲಿ ತನ್ನ ಪತ್ನಿ ಈಗಾಗಲೇ 20 ಸಾವಿರ ರೂ.ಗಳ ಪಡೆದುಕೊಳ್ಳುತ್ತಿದ್ದಾಳೆ. ಹೀಗಾಗಿ ಹೆಚ್ಚುವರಿಯಾಗಿ 10 ಸಾವಿರ ರೂ. ಪರಿಹಾರ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಇದನ್ನು ತಳ್ಳಿ ಹಾಕಿರುವ ಹೈಕೋರ್ಟ್, ಕೌಟುಂಬಿಕ ಕಲಹ ಕಾಯಿದೆ ಸೆಕ್ಷನ್ 20(1)ಡಿ ಅಡಿ ಹಾಗೂ ದಂಡ ಪ್ರಕ್ರಿಯ ಸಂಹಿತೆ 125ರ ಅಡಿಯಲ್ಲಿ ಪತ್ನಿಯಾದವರು ನಿರ್ವಹಣಾ ವೆಚ್ಚವಾಗಿ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಅಲ್ಲದೆ, ಹಿಂದು ವಿವಾಹ ಕಾಯಿದೆ ಮತ್ತು ಹಿಂದು ದತ್ತು ನಿರ್ವಹಣೆ ಕಾಯಿದೆಯ 1956ರ ಅಡಿಯಲ್ಲಿ ಪರಿಹಾರ ಕೇಳಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕಾಯಿದೆಗಳ ಅಡಿಯಲ್ಲಿ ಪ್ರತ್ಯೇಕ ಪರಿಹಾರ ಪಡೆದುಕೊಳ್ಳಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾಗಿರುವ ಕಿರಣ್ ಅವರು ಪ್ರತಿವಾದಿಯಾಗಿರುವ ಪ್ರೇಮಾ(ಹೆಸರುಗಳನ್ನು ಬದಲಿಸಲಾಗಿದೆ) ಅವರನ್ನು 2018ರ ಡಿಸೆಂಬರ್ 31ರಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. 2020ರ ಡಿಸೆಂಬರ್ 11ರಲ್ಲಿ ಪ್ರೇಮಾ ಕಿರುಕುಳ ಆರೋಪದಲ್ಲಿ ದೂರು ದಾಖಲಿಸಿದ್ದರು. ಬಳಿಕ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿ ಸಿವಿಲ್ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಕಿರಣ್ ಅವರು ಪ್ರೇಮಾ ಅವರಿಗೆ ಮಧ್ಯಂತರ ಪರಿಹಾರವಾಗಿ 20 ಸಾವಿರ ನೀಡುವುದಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು.
ಇದರ ನಡುವೆ ಕಿರಣ್ ವಿವಾಹ ವಿಚ್ಛೇದನ ನೀಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಪರಿಹಾರವಾಗಿ ಮತ್ತೆ 10 ಸಾವಿರ ರೂ.ಗಳ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಮೆಟ್ರೋ ಯೋಜನೆ: ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ