ಬೆಂಗಳೂರು: ಅನರ್ಹ ಶಾಸಕ ಆರ್.ಶಂಕರ್ಗೆ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ನೀಡುವಂತೆ ಶಂಕರ್ ಬೆಂಬಲಿಗರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ್ದು ಸಿಎಂ ನಿವಾಸಕ್ಕೆ ಬಂದಿದ್ದ ರಮೇಶ್ ಜಾರಕಿಹೊಳಿ ಕಾಲಿಗೆ ಬಿದ್ದು ಟಿಕೆಟ್ ಕೊಡಿಸಿ ಎಂದು ಬೇಡಿಕೊಂಡ ಘಟನೆ ನಡೆದಿದೆ.
ರಾಣಿಬೆನ್ನೂರಿನಿಂದ ಆರ್ ಶಂಕರ್ ಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಆರ್ ಶಂಕರ್ ಬೆಂಬಲಿಗರ ದಂಡು ಆಗಮಿಸಿದೆ. ರಾಣಿಬೆನ್ನೂರಿನಿಂದ ಆಗಮಿಸಿರುವ ನೂರಾರು ಬೆಂಬಲಿಗರು ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟರೆ ನಾವು ಅವರ ಪರ ಕೆಲಸ ಮಾಡಲ್ಲ ನಮ್ಮ ನಾಯಕ ಆರ್ ಶಂಕರ್ ಅವರಿಗೇ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದು, ಟಿಕೆಟ್ ಕೊಡದೇ ಇದ್ದರೆ ಈ ಸ್ಥಳ ಬಿಟ್ಟು ಕದಲಲ್ಲ ಎಂದು ಕುಳಿತಿದ್ದಾರೆ.
ಬಿಜೆಪಿ ನಾಯಕರು ಅವರಿಗೆ ಬೇಕಾದಾಗ ನಮ್ಮ ಶಂಕರರಣ್ಣನನ್ನು ಬಳಸಿಕೊಂಡ್ರು ಇವಾಗ ಬೇಡ ಅಂತಾ ಒಬ್ಬೊಬ್ಬರನ್ನೇ ಕೈ ಬಿಡುತ್ತಿದ್ದಾರೆ. ನಮ್ಮ ನಾಯಕ ಶಂಕರ್ ಸರ್ಕಾರ ರಚನೆಗಾಗಿ ರಾಜೀನಾಮೆ ಕೊಟ್ಟು ಹೊರಗೆ ಬಂದರು. ಈಗ ಅವರನ್ನು ಬೀದಿಗೆ ತಂದಿದ್ದಾರೆ. ನಾವು ಇದನ್ನು ಸಹಿಸೋದಿಲ್ಲ, ನಮ್ಮ ನಾಯಕ ಶಂಕರ್ಗೆ ಟಿಕೆಟ್ ಕೊಡಲೇಬೇಕು ಒಂದು ವೇಳೆ ಇವರಿಗೆ ಕೊಡದೆ ಬೇರೆಯವರಿಗೆ ಟಿಕೆಟ್ ಕೊಟ್ಟರೆ ನಾವು ಅವರ ಪರ ಕೆಲಸ ಮಾಡಲ್ಲ ಚುನಾವಣೆಯನ್ನೇ ಬಹಿಷ್ಕಾರ ಮಾಡ್ತೇವೆ ಎಂದು ಬಿಜೆಪಿ ನಾಯಕರಿಗೆ ಆರ್. ಶಂಕರ್ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸಿಎಂ ನಿವಾಸಕ್ಕೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಆಗಮಿಸಿದರು. ಯಡಿಯೂರಪ್ಪ ನಿವಾಸದಿಂದ ಹೊರ ಬಂದ ಜಾರಕಿಹೊಳಿಗೆ ಶಂಕರ್ ಬೆಂಬಲಿಗರು ಮುತ್ತಿಗೆ ಹಾಕಿದರು. ನಿಮ್ಮನ್ನ ನಂಬಿ ಶಂಕರ್ ರಾಜೀನಾಮೆ ಕೊಟ್ಟರು, ನೀವು ಟಿಕೆಟ್ ಕೊಡಿಸಿ ಎಂದು ರಮೇಶ ಜಾರಕಿಹೊಳಿ ಕಾಲಿಗೆ ಬೀಳಲು ಶಂಕರ್ ಅಭಿಮಾನಿಗಳು ಮುಂದಾದರು ಆದರೆ ಇದಕ್ಕೆ ಯಾವ ಪ್ರತಿಕ್ರಿಯೆ ನೀಡದ ಜಾರಕಿಹೊಳಿ ಸೈಲೆಂಟ್ ಆಗಿಯೇ ಹೊರಟು ಹೋದರು.