ಬೆಂಗಳೂರು : ನಗರದ ಬಹಳಷ್ಟು ಸಿವಿಲ್ ಕೇಸ್‍ಗಳು ರೌಡಿಗಳ ಮೂಲಕ ಇತ್ಯರ್ಥವಾಗುತ್ತಿರುವ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಯಿತು.
ರಾಜ್ಯದಲ್ಲಿ ನ್ಯಾಯಾಲಯಗಳಿಗಿಂತ ರೌಡಿಗಳೇ ತಮ್ಮ ಬಳಿ ಬರುವ ಸಾರ್ವಜನಿಕರ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿ ತೀರ್ಪು ನೀಡುತ್ತಿದ್ದಾರೆ. ಜೊತೆಗೆ ತೀರ್ಪನ್ನು ಅನುಷ್ಠಾನಕ್ಕೂ ತರುತ್ತಿದ್ದಾರೆ. ಇಂಥವರನ್ನು ರೌಡಿಗಳು ಎಂದು ಅಗೌರವ ತೋರದೆ ‘ಧರ್ಮದಾತರು’ ಅಥವಾ ‘ನ್ಯಾಯದಾತರು’ ಎಂದು ಸಂಬೋಧಿಸಬೇಕು ಎಂಬ ವಿಶೇಷ ಬೇಡಿಕೆ ಬುಧವಾರ ವಿಧಾನಸಭೆಯಲ್ಲಿ ಜನ ಪ್ರತಿನಿಧಿಗಳಿಂದ ವ್ಯಕ್ತವಾಗಿದೆ.
ವಿಧಾನಸಭೆಯಲ್ಲಿ ಇಂದು ಸಂವಿಧಾನದ ಕುರಿತು ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಎಚ್.ಕೆ.ಪಾಟೀಲ್, ನ್ಯಾಯಾಲಯದಲ್ಲಿ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ. ದೇಶದ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಸುಮಾರು 2.76 ಕೋಟಿಯಷ್ಟು ಪ್ರಕರಣಗಳು ಬಾಕಿ ಉಳಿದಿವೆ. ಉಳಿದಂತೆ ಸುಪ್ರೀಂಕೋರ್ಟ್ ಹಾಗೂ ದೇಶಾದ್ಯಂತ ಹೈಕೋರ್ಟ್‌ಗಳಲ್ಲೂ ಲಕ್ಷಾಂತರ ಪ್ರಕರಣ ಬಾಕಿ ಉಳಿದಿವೆ. ಶ್ರೀಮಂತರಿಗೆ ಅನುಕೂಲ ಕಲ್ಪಿಸಲು ಬಡವರ ಪ್ರಕರಣಗಳನ್ನು ವಿಳಂಬ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕ ಸಮರ್ಪಕವಾಗಿ ಆಗುತ್ತಿಲ್ಲ. ನ್ಯಾಯಾಲಯದಲ್ಲಿರುವ ಶೇ.30 ರಷ್ಟು ಪ್ರಕರಣಗಳಲ್ಲಿ ಸರ್ಕಾರವೇ ಪ್ರತಿವಾದಿಯಾಗಿರುತ್ತದೆ. ರಾಜ್ಯ ಸರ್ಕಾರವು ನ್ಯಾಯಾಲಯಗಳು ತೀರ್ಪು ನೀಡಿರುವ 50 ಸಾವಿರ ಪ್ರಕರಣಗಳಲ್ಲಿ ಆದೇಶ ಪಾಲನೆ ಮಾಡಿಲ್ಲ. ನ್ಯಾಯಾಂಗ ಹಾಗೂ ಕಾರ್ಯಾಂಗ ವ್ಯವಸ್ಥೆಯಲ್ಲಿನ ಲೋಪಗಳಿಂದಾಗಿ ಜನರು ಸಿವಿಲ್ ವ್ಯಾಜ್ಯಗಳನ್ನು ರಾಜಕಾರಣಿಗಳು, ಪೊಲೀಸರು ಹಾಗೂ ರೌಡಿಗಳ ಬಳಿ ಕೊಂಡೊಯ್ಯುತ್ತಿದ್ದಾರೆ. ರೌಡಿಗಳು ತಕ್ಷಣವೇ ವಿಚಾರಣೆ ನಡೆಸಿ ತೀರ್ಪು ನೀಡುವುದಲ್ಲದೆ ತೀರ್ಪನ್ನು ಅನುಷ್ಠಾನಕ್ಕೂ ತರುತ್ತಾರೆ. ಇದರಿಂದ ಸಾರ್ವಜನಿಕರು ಹೆಚ್ಚಾಗಿ ರೌಡಿಗಳ ಬಳಿಗೇ ಹೋಗುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವವರನ್ನು ರೌಡಿಗಳು ಎಂದು ಕರೆಯುವುದು ಸರಿಯಲ್ಲ. ಗೌರವಯುತವಾಗಿ ರಿಯಲ್ ಎಸ್ಟೇಟ್ ಏಜೆಂಟ್, ಧರ್ಮದಾತರು ಅಥವಾ ನ್ಯಾಯಾದಾತರು ಎಂದು ಸಂಬೋಧಿಸಬೇಕು. ಅವರನ್ನು ರೌಡಿಗಳು ಎಂದು ಕರೆದರೆ ನಾನೂ ಸೇರಿ ನಮ್ಮಂತಹ ಜನ ಪ್ರತಿನಿಧಿಗಳಿಗೆ ನೋವಾಗುತ್ತದೆ. ನಮ್ಮೆಲ್ಲರ ಪರವಾಗಿಯೇ ಅವರು ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಮನವಿ ಸಲ್ಲಿಸಿದರು.
ಇನ್ನು ಇದಕ್ಕೆ ಪೂರಕವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ನೀವು ಹೇಳುತ್ತಿರುವುದು ಸತ್ಯ. ರೌಡಿಗಳ ಬಳಿ ಹೋದರೆ ಬೇಗ ಪ್ರಕರಣಗಳ ವಿಲೇವಾರಿಯಾಗುತ್ತದೆ. ನ್ಯಾಯಾಲಯಗಳಿಂದ ಬೇಗ ತೀರ್ಪು ಸಿಗದಿರುವುದರಿಂದ ಜನರು ಹೆಚ್ಚಾಗಿ ರೌಡಿಗಳ ಬಳಿ ಹೋಗುತ್ತಿದ್ದಾರೆ ಎಂದು ಹೇಳಿದರು.