ಬೆಂಗಳೂರು: ಕೊರೊನಾ ವೈರಸ್ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕ ಮಾತನಾಡಿದ ಅವರು, ಕೊರೊನಾ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಲಹೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಬಜೆಟ್ ಬಗ್ಗೆ ಯಾರೆಲ್ಲ ಮಾತನಾಡಬೇಕು, ಯಾವೆಲ್ಲ ಕ್ಷೇತ್ರಗಳಿಗೆ ಅನುದಾನದ ಕೊರತೆಯಾಗಿದೆ. ಕೇಂದ್ರದಿಂದ ಅನುದಾನ ಕಡಿತವಾಗಿರುವ ಬಗ್ಗೆ ಚರ್ಚೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ 11 ಸಾವಿರ ಕೋಟಿ ಬಂದಿಲ್ಲ. ಇದೆಲ್ಲವನ್ನೂ ಮುಂದಿಟ್ಟುಕೊಂಡು ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡ್ತೇವೆ. ಪ್ರವಾಹ ಸಂತ್ರಸ್ತರ ಪರಿಹಾರದ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿಸಿದರು.
ತುಮಕೂರಿನ ರೈತರ ಜೊತೆ ಅಧಿಕಾರಿಗಳ ದುರ್ವರ್ತನೆ ವಿಚಾರದ ಬಗ್ಗೆ ಮಾತನಾಡಿ, ಯಾವ ಅಧಿಕಾರಿ ತಪ್ಪು ಮಾಡಿದ್ದಾರೋ ಅವರ ಮೇಲೆ ಕಾನೂನು ರೀತಿಯ ಶಿಸ್ತು ಕ್ರಮ ಜರುಗಿಸಬೇಕು. ಅಧಿಕಾರಿಗಳ ದುರ್ವರ್ತನೆಯಿಂದ ಮತ್ತು ತಪ್ಪು ನಿರ್ಧಾರಗಳಿಂದ ರೈತರಿಗೆ ನಷ್ಟವಾದರೆ ಸರ್ಕಾರವೇ ನಷ್ಟ ಭರಿಸಬೇಕಾಗುತ್ತದೆ. ಸರ್ಕಾರ ಜವಾಬ್ದಾರಿ ತೆಗೆದುಕೊಂಡು ರೈತರಿಗೆ ಆಗಿರುವ ನಷ್ಟವನ್ನು ಭರಿಸಬೇಕು ಎಂದು ಆಗ್ರಹಿಸಿದರು.