ಬೆಂಗಳೂರು: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ತಾತ್ಕಾಲಿಕವಾಗಿ ಹಿರಿಯ ನಾಗರಿಕರಿಗೆ ನೀಡುತ್ತಿರುವ ಶೇ 25 ರಷ್ಟು ಪ್ರಯಾಣ ದರದ ರಿಯಾಯಿತಿಯನ್ನು ಹಿಂಪಡೆಯಲಾಗಿದೆ.
ಪ್ರಸ್ತುತ ಸರ್ಕಾರದ ಆದೇಶದನ್ವಯ 60 ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ನಿಗಮದ ನಗರ, ಹೊರವಲಯ, ಸಾಮಾನ್ಯ, ವೇಗದೂತ, ಆರೆಸುವಿಹಾರಿ ಮತ್ತು ರಾಜಹಂಸ ಬಸ್ಗಳಲ್ಲಿ ಕರ್ನಾಟಕ ರಾಜ್ಯ ಮತ್ತು ಅಂತರ್ ರಾಜ್ಯ ಸಾರಿಗೆಗಳಲ್ಲಿ ಶೇ.25ರಷ್ಟು ಟಿಕೆಟ್ ದರ ರಿಯಾಯಿತಿ ನೀಡಲಾಗುತ್ತಿದೆ.
ಆದರೆ ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, 60 ವರ್ಷಕ್ಕೂ ಹೆಚ್ಚಿನ ವಯಸ್ಸಿನ ನಾಗರಿಕರು ಕೊರೊನಾ ವೈರಸ್ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಿರುವುದ್ದಾರೆ. ಹಿರಿಯ ನಾಗರಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಅವರ ಪ್ರಯಾಣವನ್ನು ಉತ್ತೇಜಿಸದಿರಲು, ಈ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ರೈಲ್ವೆ ಇಲಾಖೆಯು ಸಹ ಈ ಸಂಬಂಧ ಟಿಕೆಟ್ ದರ ರಿಯಾಯಿತಿಯನ್ನು ಹಿಂಪಡೆದಿರುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ, ರಾಜ್ಯದ ಹಿರಿಯ ನಾಗರಿಕರಿಗೆ ಪ್ರಸ್ತುತ ನೀಡುತ್ತಿರುವ ಶೇ.25 ರಷ್ಟು ಪ್ರಯಾಣ ದರ ರಿಯಾಯಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆವಿಗೂ ಹಿಂಪಡೆಯಲಾಗಿದೆ. ಹಿರಿಯ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಈ ಕ್ರಮವನ್ನು ಕೈಗೊಂಡಿದ್ದು, ಸಹಕರಿಸುವಂತೆ ಮನವಿ ಮಾಡಲಾಗಿದೆ.