ಬೆಂಗಳೂರು: ಕೋವಿಡ್ ಸೋಂಕಿಗೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಅವರು, ಕೋವಿಡ್ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯೆಯೇ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾಯುತ್ತಿರುವುದು ಆಘಾತಕಾರಿ ಸಂಗತಿ. ಸರ್ಕಾರ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸದೆ ಜನರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ. ಸರ್ಕಾರಕ್ಕೆ ಜೀವದ ಬೆಲೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಸದ್ಯ 7,922 ಮಂದಿ ಕೋವಿಡ್ ಸೋಂಕಿಗೆ ಮೃತಪಟ್ಟಿದ್ದಾರೆ. ಪ್ರತಿದಿನ ಸರಾಸರಿ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಸೆಪ್ಟೆಂಬರ್ 18 ರಂದು ಒಂದೇ ದಿನ 179 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೊನಾಗೆ ಅತಿ ಹೆಚ್ಚು ಸಾವು ಸಂಭವಿಸಿದ ದಿನವಾಗಿ ಪರಿಣಮಿಸಿದೆ ಎಂದಿದ್ದಾರೆ.
ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಸಹ ಏರಿಕೆ ಕಾಣುತ್ತಿದೆ. ಆದರೆ ರೋಗ ನಿಯಂತ್ರಣ ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಆರಂಭದಿಂದಲೂ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ದಿನೇಶ್ ಗುಂಡೂರಾವ್ ನಿರಂತರವಾಗಿ ಆರೋಪಿಸುತ್ತಿದ್ದಾರೆ.