ಬೆಂಗಳೂರು: ಬೆಂಗಳೂರು ಕ್ಷೇತ್ರಗಳ ಪೈಕಿ ಅತಿಹೆಚ್ಚು ವಾಣಿಜ್ಯ ಚಟುವಟಿಕೆಗಳಿಂದ ಕೂಡಿರುವ ಹಾಗೂ ಕೊಳೆಗೇರಿಗಳಿರುವ ಕ್ಷೇತ್ರ ಗಾಂಧಿನಗರ. ಆದರೆ, ಈ ಬಾರಿ ಕ್ಷೇತ್ರದಲ್ಲಿ ಆರನೇ ಬಾರಿ ಗೆಲುವಿನ ವಿಶ್ವಾದಲ್ಲಿರುವ ಕೈ ಅಭ್ಯರ್ಥಿ ದಿನೇಶ್ ಗುಂಡೂರಾವ್ ಅವರಿಗೆ ಬಿಜೆಪಿ ಅಭ್ಯರ್ಥಿ ಸವಾಲೊಡ್ಡಲು ಕಸರತ್ತು ನಡೆಸುತ್ತಿದ್ದಾರೆ.
ಸ್ಯಾಂಡಲ್ವುಡ್ನ ಕರ್ಮ ಭೂಮಿಯಾಗಿರುವ ಗಾಂಧಿನಗರ ಕ್ಷೇತ್ರ ಬೆಂಗಳೂರಿನ ಪ್ರತಿಷ್ಠಿತ ರಣಕಣವಾಗಿದೆ. ಕಾಂಗ್ರೆಸ್ನ ಭದ್ರಕೋಟೆ ಇದಾಗಿದೆ. ದಿನೇಶ್ ಗುಂಡೂರಾವ್ ಈ ಕ್ಷೇತ್ರದ ಗೆಲ್ಲುವ ಕುದುರೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಹಲವು ಕೊಳೆಗೇರಿಗಳಿದ್ದು, ಗೆಲುವಿನ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರವಹಿಸಿವೆ. ದಿನೇಶ್ ಗುಂಡೂರಾವ್ ಗೆಲುವಿಗೆ ಕೊಳೆಗೇರಿ ಮತಗಳು ನಿರ್ಣಾಯಕವಾಗಿದೆ. ಸತತ 5 ಬಾರಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎನಿಸಿರುವ ದಿನೇಶ್ ಗುಂಡೂರಾವ್ 6ನೇ ಬಾರಿ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.
ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಇಲ್ಲ. ಹೀಗಾಗಿ ಮೇಲ್ನೋಟಕ್ಕೆ ದಿನೇಶ್ ಗುಂಡೂರಾವ್ ಗೆಲುವು ಸುಗಮ ಅಂದುಕೊಂಡರೂ ವಾಸ್ತವದಲ್ಲಿ ಈ ಬಾರಿ ರಾಜಕೀಯ ಚಿತ್ರಣ ಸ್ವಲ್ಪ ಭಿನ್ನವಾಗಿದೆ. ಕೊಳೆಗೇರಿ ಮತಗಳು ನಿರ್ಣಾಯಕವಾಗಿದ್ದು, ಆ ಮತಬುಟ್ಟಿಗೆ ಬಿಜೆಪಿ ಎಷ್ಟರ ಮಟ್ಟಿಗೆ ಕೈ ಹಾಕುವಲ್ಲಿ ಸಫಲವಾಗಿದೆ ಎಂಬುದು ಎಲ್ಲರ ಕುತೂಹಲವಾಗಿದೆ.
ಕ್ಷೇತ್ರದ ಅಭ್ಯರ್ಥಿಗಳು ಯಾರು?: ಗಾಂಧಿನಗರ ಕಾಂಗ್ರೆಸ್ನ ಭದ್ರಕೋಟೆಯಾಗಿದೆ. ದಿನೇಶ್ ಗುಂಡೂರಾವ್ ನಾಲ್ಕನೇ ಬಾರಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿರುವ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಇತ್ತ ಬಿಜೆಪಿಯಿಂದ ಸಪ್ತಗಿರಿ ಗೌಡರನ್ನು ಎರಡನೇ ಬಾರಿ ಕಣಕ್ಕಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮಧ್ಯೆ ಪೈಪೋಟಿ ಇರುತ್ತದೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿಲ್ಲ.
ಈ ಸಾರಿ ಬಿಜೆಪಿಯಿಂದ ಸಪ್ತಗಿರಿ ಗೌಡ ಮತ್ತೊಮ್ಮೆ ಸ್ಪರ್ಧೆಗೆ ಇಳಿದಿದ್ದಾರೆ. ಈ ಬಾರಿ ಗಾಂಧಿನಗರ ಕದನದಲ್ಲಿ ಟ್ವಿಸ್ಟ್ ನೀಡಿರುವುದು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ. ಬಿಜೆಪಿ ಟಿಕೆಟ್ ವಂಚಿತ ಕೃಷ್ಣಯ್ಯ ಶೆಟ್ಟಿ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಕೃಷ್ಣಯ್ಯ ಶೆಟ್ಟಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದರಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಗೆ ಗೆಲುವು ಸವಾಲಾಗಿದೆ. ಜೆಡಿಎಸ್ ಅಭ್ಯರ್ಥಿಯಾಗಿ ನಾರಾಯಣಸ್ವಾಮಿ ಕೂಡಾ ಕಣದಲ್ಲಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ನಾಲ್ಕು ಪಕ್ಷೇತರ ಅಭ್ಯರ್ಥಿಗಳು ಸೇರಿ 15 ಅಭ್ಯರ್ಥಿಗಳು ಗಾಂಧಿನಗರದ ರಣಕಣದಲ್ಲಿ ಸೆಣೆಸಾಟ ನಡೆಸಲಿದ್ದಾರೆ. ರಾಜಕೀಯದ ಇನ್ನೊಂದು ಇನಿಂಗ್ಸ್ ಆರಂಭಿಸಲು ಕಣಕ್ಕಿಳಿದಿರುವ ಕೃಷ್ಣಯ್ಯ ಶೆಟ್ಟಿ ಕ್ಷೇತ್ರದ ರಾಜಕೀಯ ಲೆಕ್ಕಾಚಾರವನ್ನು ಬದಲಿಸ್ತಾರಾ ಎಂಬ ಕುತೂಹಲ ಮೂಡಿದೆ.
ಕ್ಷೇತ್ರದ ಜಾತಿ ಲೆಕ್ಕಾಚಾರ ಹೇಗಿದೆ?: ಗಾಂಧಿನಗರ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,31,410 ಇದೆ. ಪುರುಷ 1,19,277 ಮಹಿಳೆಯರು 1,12,108 ಇತರ 25 ಇದ್ದಾರೆ. ಈ ಪೈಕಿ ಎಸ್‌ಸಿ-ಎಸ್‌ಟಿ 60,000, ತಮಿಳು ಮತ್ತು ತೆಲುಗು ಭಾಷಿಕರು 60,000 ಇದ್ದಾರೆ. ಒಕ್ಕಲಿಗರು 33,000 ಮತದಾರರು ಇದ್ದರೆ, ಬ್ರಾಹ್ಮಣ ಸಮುದಾಯ 18,000, ದೇವಾಂಗ 15,000, ಮುಸ್ಲಿಂ 12,000, ಲಿಂಗಾಯತರು 6,000, ಕುರುಬರ ಸಂಖ್ಯೆ 4,000 ಇದೆ.
ತಮಿಳರೇ ಈ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ತಮಿಳರು ಈ ಕ್ಷೇತ್ರದ ನಿರ್ಣಾಯಕರಾಗಿದ್ದಾರೆ. ಈ ಕ್ಷೇತ್ರವು ಚಿತ್ರರಂಗದ ಚಟುವಟಿಕೆ, ಕೆಂಪೇಗೌಡ ಬಸ್ ನಿಲ್ದಾಣ, ನಗರ ಕೇಂದ್ರ ರೈಲು ನಿಲ್ದಾಣ, ಗಾಂಧಿನಗರ, ಕಾಟನ್ಪೇಟೆ ಮತ್ತಿತರ ವಾಣಿಜ್ಯ ಚಟುವಟಿಕೆಯ ತಾಣದಿಂದ ಕೂಡಿದೆ. ಆದರೆ, ಅಭಿವೃದ್ಧಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕೊಳಚೆ ಪ್ರದೇಶಗಳು, ಕೊಳೆಗೇರಿಗಳು, ಕಿರಿದಾದ ರಸ್ತೆ, ಮಳೆ ಅನಾಹುತ, ಹಾಳಾದ ರಸ್ತೆ, ಚರಂಡಿ ವ್ಯವಸ್ಥೆ ಕ್ಷೇತ್ರದ ಪ್ರಮುಖ ಸಮಸ್ಯೆಗಳಾಗಿವೆ.
2018ರ ಫಲಿತಾಂಶ ಏನು?: 2018 ರಲ್ಲಿ ಅಭ್ಯರ್ಥಿ ಬದಲಿಸಿ ಬಿಜೆಪಿ ಮಾಜಿ ಸಚಿವ ರಾಮಚಂದ್ರಗೌಡರ ಪುತ್ರ ಸಪ್ತಗಿರಿ ಗೌಡರಿಗೆ ಟಿಕೆಟ್ ನೀಡಿತ್ತು. ದಿನೇಶ್ ಗುಂಡೂರಾವ್ ಈ ಯುವ ನಾಯಕನ ವಿರುದ್ಧ 10,070 ಮತಗಳ ಅಂತರದಿಂದ ಸುಲಭವಾಗಿ ಗೆಲುವು ಸಾಧಿಸಿದ್ದರು. ಗೆದ್ದ ದಿನೇಶ್ ಗುಂಡೂರಾವ್ ಶೇ.37 ರಷ್ಟು ಅಂದರೆ 47,354 ಮತ ಗಳಿಸಿದ್ದರು. ಬಿಜೆಪಿಯ ಸಪ್ತಗಿರಿಗೌಡ ಶೇ. 29ರಷ್ಟು ಅಂದರೆ 37,284 ಮತ ಗಳಿಸಿದ್ದರೆ, ಶೇ.29ರಷ್ಟು ಅಂದರೆ 36,635 ಮತ ಗಳಿಸಿದ ನಾರಾಯಣಸ್ವಾಮಿ ಮೂರನೇ ಸ್ಥಾನ ಪಡೆದಿದ್ದರು.
ಕ್ಷೇತ್ರದ ಜನ ಹೇಳುವುದೇನು?: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಆದರೆ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆಯಿಂದ ಜನರ ಪಾಡು ಹೇಳತೀರದಾಗಿದೆ. ಹೀಗಾಗಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಚಿತ ಎಂದು ಸ್ಥಳೀಯ ಸಂತೋಷ್ ತಿಳಿಸಿದ್ದಾರೆ. ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಹಾಗಾಗಿ ಇಲ್ಲಿ ಬದಲಾವಣೆ ಆಗಲಿದೆ. ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಸಮಸ್ಯೆಗಳು ಇದ್ದೇ ಇದೆ. ಆದರೆ ಅದಕ್ಕೆ ತಕ್ಕ ಸರ್ಕಾರ ವ್ಯವಸ್ತೆಯನ್ನು ಮಾಡುತ್ತಿದೆ ಎಂದು ಶ್ರೀನಿವಾಸ್ ಎಂಬವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಟಿಎಂ ಲೇಔಟ್ನಲ್ಲಿ ಮತ್ತೆ ಸೋಲಿಲ್ಲದ ಸರದಾರರಾಗುವರೇ ರಾಮಲಿಂಗಾರೆಡ್ಡಿ!