ಬೆಂಗಳೂರು: ನಾನು ಪಾಲಿಕೆಯಲ್ಲಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ ಅಂತ ಹೇಳೋಕೆ ಹೋಗಲ್ಲ. ಆದರೆ, ತನಿಖೆ ಆಗಬೇಕಾಗಿರುವುದು ಅತ್ಯಗತ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ತಮ್ಮ ನಿವಾಸದ ಬಳಿ ಬಿಬಿಎಂಪಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, "ಶಂಕೆ ಇರುವುದಕ್ಕೆ ತನಿಖೆ ಮಾಡಿಸುತ್ತಿರುವುದು. ಸ್ಪಷ್ಟವಾದ ತನಿಖೆ ಆಗುವ ಅವಶ್ಯಕತೆ ಇದೆ. ಹಿಂದೆ ಫೈಲ್ಗಳನ್ನು ಸುಟ್ಟು ಹಾಕಿರುವ ಘಟನೆಗಳನ್ನು ನೋಡಿದ್ದೇವೆ. ಬಿಬಿಎಂಪಿ ಸರಿಪಡಿಸುವ ಕೆಲಸ ಡಿಸಿಎಂ ಮಾಡ್ತಿದ್ದಾರೆ. ಗುಣಮಟ್ಟದ ಕಾಮಗಾರಿ ಆಗಬೇಕಿದೆ. ಹಿಂದೆ ತಪ್ಪು ಮಾಡಿದವರು ಯಾರು ಎಂಬುದು ತನಿಖೆಯಿಂದ ಹೊರ ಬರಬೇಕು" ಎಂದು ತಿಳಿಸಿದರು.
ಬಿಜೆಪಿ ಕಮಿಷನ್ ಆರೋಪ ಸುಳ್ಳು : "ಎಲ್ಲ ಕಡೆ ಟೈಟ್ ಮಾಡುತ್ತಿರುವುದಕ್ಕಾಗಿ ಬಿಜೆಪಿ ಅವರಿಗೆ ಟೆನ್ಶನ್ ಆಗಿದೆ. ಬಿಬಿಎಂಪಿ ವ್ಯವಸ್ಥೆ ಮೊದಲು ಸರಿಪಡಿಬೇಕು. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಬಿಲ್ ಆಗಬೇಕು ನಿಜ. ಆದರೆ, ಕೆಲಸವನ್ನೇ ಮಾಡದವರಿಗೆ ಯಾಕೆ ಬಿಲ್ ಆಗಬೇಕು?. ಎರಡು ವರ್ಷದ ತನಕ ಬಿಲ್ ಆಗಲ್ಲ ಎನ್ನುವುದು ಗುತ್ತಿಗೆದಾರರಿಗೆ ಗೊತ್ತು. ದುಡ್ಡು ಇದ್ದರೆ ಮಾತ್ರ ಕೆಲಸ ಮಾಡಬೇಕು. ದುಡ್ಡು ಇಲ್ಲದಿದ್ದರೂ ಯಾಕೆ ಕೆಲಸ ಮಾಡುವುದಕ್ಕೆ ಮುಂದಾಗುತ್ತಾರೆ?" ಎಂದು ಪ್ರಶ್ನಿಸಿದರು.
ಯಾವ ಕಂಟ್ರಾಕ್ಟರ್ ಏನು ಕೆಲಸ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಬಿಬಿಎಂಪಿಯಲ್ಲಿ ಇರಬೇಕು. ಅದಕ್ಕೋಸ್ಕರವೇ ತನಿಖಾ ಸಮಿತಿ ಆಗಿದೆ. ಗುತ್ತಿಗೆದಾರರು ಇಷ್ಟು ದಿನವೇ ಕಾದಿದ್ದಾರೆ, ಇನ್ನು ಹದಿನೈದು ದಿನ ಕಾಯಲಿ. ನಮ್ಮ ಕ್ಷೇತ್ರದಲ್ಲಿ ನಕಲಿ ಆಗಿದ್ದರೆ ಅದೂ ಕೂಡ ತನಿಖೆ ಆಗಲಿ ಎಂದು ಒತ್ತಾಯಿಸಿದರು.
ಅಧಿಕಾರಿಗಳ ಮೇಲೆ ಕ್ರಮ ಯಾಕಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆಯಲ್ಲಿ ಏನು ಬರುತ್ತದೆ ನೋಡೋಣ. ಹಿಂದೆಯೂ ಅಧಿಕಾರಿಗಳ ವಿರುದ್ದ ಕ್ರಮ ಆಗಿದೆ. ಇದು ಗುತ್ತಿಗೆದಾರರು Vs ರಾಜಕಾರಣಿಗಳ ವಿಷಯ ಅಲ್ಲ. ಹಾಗೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಅಷ್ಟೇ. ಇದು ಬೆಂಗಳೂರನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ಸಮಜಾಯಿಷಿಕೊಟ್ಟರು.
ಧರ್ಮಸ್ಥಳ ಸೌಜನ್ಯ ಕೇಸ್ ಮರು ತನಿಖೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ಕೇಸ್ ಯಾಕೆ ಸಿಬಿಐ ಕ್ಲೋಸ್ ಮಾಡಿದೆ ಎಂಬ ಮಾಹಿತಿಯನ್ನು ಸರ್ಕಾರ ತರಿಸಿಕೊಂಡಿದೆ. ಮರು ತನಿಖೆಗೆ ಹೆಚ್ಚಿನ ಮಾಹಿತಿ ಇದೆಯೇ?, ಹೊಸ ಎವಿಡೆನ್ಸ್ ಏನಾದ್ರೂ ಇದೆಯಾ?. ಈ ಬಗ್ಗೆ ಸಿಎಂ ಹಾಗೂ ಗೃಹ ಇಲಾಖೆ ಮಾಹಿತಿ ತರಿಸಿಕೊಳ್ಳುತ್ತದೆ. ನಾನೂ ಕೂಡ ಸಿಎಂ ಹಾಗೂ ಗೃಹ ಸಚಿವರ ಜೊತೆಗೆ ಮಾತನಾಡ್ತೇನೆ. ಮುಂದಿನ ತೀರ್ಮಾನ ಗೃಹ ಇಲಾಖೆ ತೆಗೆದುಕೊಳ್ಳಬೇಕು" ಎಂದರು.
ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರ ಮೇಲಿನ ಕೇಸ್ ಹಿಂಪಡೆಯುವ ವಿಚಾರವಾಗಿ ಮಾತನಾಡಿದ ಅವರು, "ಈ ಎಲ್ಲ ಮಾಹಿತಿಗಳನ್ನು ವಿಚಾರಣೆ ನಡೆಸಲಾಗುವುದು. ಒಬ್ಬ ಅಮಾಯಕ ಕೂಡ ಜೈಲಿನಲ್ಲಿ ಇರಬಾರದು. ಅನಾವಶ್ಯಕವಾಗಿ ಹಾಗೆ ಇದ್ದರೆ ಸರ್ಕಾರ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತೆ. ಯಾವುದೇ ಬೇರೆ ಧರ್ಮದವರು ಜೈಲಲ್ಲಿ ಬಿದ್ದಿರಲಿ ಎಂದು ಹೇಳಲು ಆಗುತ್ತಾ? ಎಂದು ಪ್ರಶ್ನಿಸಿದರು. ಬಳಿಕ, ಹಿಂದು ಮುಸ್ಲಿಂ ಯಾವುದೇ ಧರ್ಮದ ಅಮಾಯಕರ‍್ಯಾರಿಗೂ ಶಿಕ್ಷೆ ಆಗಕೂಡದು. ಪರಿಶೀಲನೆ ಮಾಡಿ ನೈಜತೆ ನೋಡಿ ತೀರ್ಮಾನ ಮಾಡಲಾಗುವುದು ಎಂದರು.
ಇದನ್ನೂ ಓದಿ : ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ: ತಾಂತ್ರಿಕ ವಿಚಾರಣೆಗೆ ಆದೇಶ
ಚೆಲುವರಾಯಸ್ವಾಮಿ ವಿರುದ್ಧ ಪೇಸಿಎಸ್ ಕ್ಯಾಂಪೇನ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರೋ ಲೆಟರ್ ಬರೆದರು ಅಂತ ರಾಜ್ಯಪಾಲರು ಮಾಹಿತಿ ಕೇಳಿದರೆ ಅದೇ ದೊಡ್ಡ ಸುದ್ದಿ. ಇದರ ಹಿಂದೆ ಯಾರಿದ್ದಾರೆ ಎನ್ನೋದು ಗೊತ್ತಾಗಬೇಕಾಗುತ್ತದೆ. ಲೆಟರ್ ಕೊಟ್ಟವರು, ಅವರ ಹಿನ್ನೆಲೆ ಏನು ಎಂದು ಗೊತ್ತಾಗಬೇಕು. ಹಿಂದೆ ಹೆಚ್ಡಿಕೆ ಚೆಲುವರಾಯಸ್ವಾಮಿ ಮೇಲೆ ಸುಳ್ಳು ಆರೋಪ ಮಾಡಿದ್ದರು. ಇದು ಎರಡನೇ ಸುಳ್ಳು ಆರೋಪ ಎಂದು ಕಿಡಿಕಾರಿದರು.
ಮಂಡ್ಯದ ರಾಜಕಾರಣವನ್ನು ಕುಮಾರಸ್ವಾಮಿಗೆ ಸಹಿಸುವುದಕ್ಕೆ ಆಗ್ತಿಲ್ಲ. ಮಂಡ್ಯದಲ್ಲಿ ಜೆಡಿಎಸ್ ಧೂಳಿಪಟ ಆಯ್ತಲ್ಲ ಅದಕ್ಕಾಗಿ ಆರೋಪ ಮಾಡ್ತಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗದೇ ಟಾರ್ಗೆಟ್ ಮಾಡಿದ್ದಾರೆ. ಸಹನೆ ಇಲ್ಲದೆಯೇ ಹುಚ್ಚಾಪಟ್ಟೆ ಏನೇನೋ ಮಾಡ್ತಿದ್ದಾರೆ. ಮುಂದೆ ಇದೇ ಜೆಡಿಎಸ್ ನಾಯಕರಿಗೆ ತಿರುಗೇಟು ಆಗುತ್ತದೆ. ಇನ್ನು ಮೇಲೆ ಇವರು ನಿಜ ಹೇಳಿದರೂ ಕೂಡ ಜನ ನಂಬಲ್ಲ ಎಂದು ತಿಳಿಸಿದರು.