ಬೆಂಗಳೂರು: ಭಾರತವು ತಂತ್ರಜ್ಞಾನವನ್ನು ಅತ್ಯಂತ ವೇಗವಾಗಿ ಅಳವಡಿಸಿಕೊಂಡ ಪ್ರಮುಖ ರಾಷ್ಟ್ರವಾಗಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ನಗರದಲ್ಲಿಂದು ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆ (ಡಿಐಎ)ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಜಿಟಲ್ ಆರ್ಥಿಕತೆಯು 2014ರಲ್ಲಿ ಒಟ್ಟು ಜಿಡಿಪಿಯ ಶೇ.5 ರಷ್ಟು ಕೊಡುಗೆ ನೀಡಿದ್ದು, ಪ್ರಸ್ತುತ ಶೇ.11 ರಷ್ಟಾಗಿದೆ. ಅದನ್ನು 2026ರ ವೇಳೆಗೆ ಶೇ 20ಕ್ಕಿಂತ ಹೆಚ್ಚು ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಸಿಲಿಕಾನ್ ಸಿಟಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ಸ್ಟಾರ್ಟಪ್ ಹಾಗೂ ಹೊಸ ಇನ್ನೊವೇಷನ್‌ಗೆ ಎಪಿಕ್ ಸೆಂಟರ್ ಆಗಿದೆ. ಭಾರತ ಹೊಸ ಡಿಜಿಟಲ್ ಇನ್ನೋವೇಷನ್‌ನಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಪ್ರತಿಯೊಬ್ಬರು ಡಿಜಿಟಲ್ ಅವಕಾಶಗಳನ್ನ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದಾಗಿದೆ. ಸರ್ಕಾರ ಮತ್ತು ಜನರ ನಡುವೆ ನೇರ ಸಂಪರ್ಕವನ್ನು ಸಾಧಿಸಬಹುದಾಗಿದೆ ಎಂದು ಹೇಳಿದರು.
2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಡಿಜಿಟಲ್ ಭವಿಷ್ಯದ ಬಗ್ಗೆ ಮಾತನಾಡಿ, ಅವರ ಆಡಳಿತದ ದಶಕವನ್ನು ಟೆಕೇಡ್ ಎಂದು ಕರೆದಿದ್ದಾರೆ. ಡಿಜಿಟಲ್ ಕ್ರಾಂತಿಯಿಂದ ಭಾರತ ವೇಗವಾಗಿ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಆಗಿರುವ ಡಿಜಿಟಲ್ ಕ್ರಾಂತಿ ಬಗ್ಗೆ ಸಂಕ್ಷಿಪ್ತ ಅಧ್ಯಯನ ಯಾರಾದರೂ ನಡೆಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮ, ಜಂಟಿ ಕಾರ್ಯದರ್ಶಿ ಆಕಾಶ್ ತ್ರಿಪಾಠಿ, ನಾಸ್ಕಾಂ ಅಧ್ಯಕ್ಷ ದೇಬ್ಜಾನಿ ಘೋಷ್ ಉಪಸ್ಥಿತರಿದ್ದರು.
ಸಭೆಯ ಮುಖ್ಯ ಉದ್ದೇಶ:
- ಜಿ- 20 ಸಭೆಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ, ಡಿಜಿಟಲ್ ಕೌಶಲ್ಯ ಕುರಿತು ಚರ್ಚೆ ನಡೆಯುತ್ತಿದೆ.
- 2026ರ ವೇಳೆಗೆ ಡಿಜಿಟಲ್ ಆರ್ಥಿಕತೆಯು ದೇಶದ ಜಿಡಿಪಿಗೆ ಶೇ 20 ಕ್ಕಿಂತ ಹೆಚ್ಚು ಕೊಡುಗೆ ಬಗೆಗೆ ಮಾತುಕತೆ ನಡೆಯುತ್ತಿವೆ.
- ಬೆಂಗಳೂರು ಸ್ಟಾರ್ಟಪ್ ಹಾಗೂ ಹೊಸ ಇನ್ನೊವೇಷನ್‌ಗೆ ಎಪಿಕ್ ಸೆಂಟರ್ ಕುರಿತ ಸಂವಾದ.
- ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಡಿಜಿಟಲ್ ಕ್ರಾಂತಿ, ಕೇಂದ್ರದಿಂದ ಬಿಡುಗಡೆಯಾದ ಹಣ ನೇರವಾಗಿ ಜನರ ಖಾತೆಗೆ, ಅದಕ್ಕೆ ಡಿಜಿಟಲ್ ಕ್ರಾಂತಿ ಕಾರಣದ ವಿಶ್ಲೇಷಣೆ.
- ಡಿಜಿಟಲ್ ತಂತ್ರಜ್ಞಾನದಿಂದ ಭಾರತ ವೇಗವಾಗಿ ಬೆಳೆದು, ಪ್ರಪಂಚದ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿರುವುದರ ಬಗೆಗೆ ಚರ್ಚೆ.
- ಒಂದು ಲಕ್ಷ ಸ್ಟಾರ್ಟಪ್ ಕಂಪನಿಗಳ ನೋಂದಣಿ.
ನಾಳೆ ಪ್ರಶಸ್ತಿ ಪ್ರಧಾನ ಸಮಾರಂಭ: ಈ ಸಭೆಯಲ್ಲಿ 29 ದೇಶಗಳ ಒಟ್ಟು 174 ಸ್ಟಾರ್ಟ್ ಅಪ್ ಕಂಪನಿಗಳು ಭಾಗವಹಿಸಿದ್ದು, ಆ.18 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾದ ವಿವಿಧ ವಿಭಾಗಗಳಲ್ಲಿನ 30 ಸ್ಟಾರ್ಟಪ್ ಕಂಪನಿಗಳಿಗೆ ಗೌರವ ಸಲ್ಲಿಕೆಯಾಗಲಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರು, ಉಸ್ತುವಾರಿ ಸಚಿವರೊಂದಿಗಿನ ಸರಣಿ ಸಭೆ ಮುಕ್ತಾಯ; ಅಸಮಾಧಾನ ಶಮನ ಕಸರತ್ತು ನಡೆಸಿದ ಸಿಎಂ ಸಿದ್ದರಾಮಯ್ಯ