ಬೆಂಗಳೂರು: ನಿಸರ್ಗ ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ತೀವ್ರ ಪರಿಣಾಮ ನಾಳೆ ರಾತ್ರಿಯಿಂದ ಕಡಿಮೆಯಾಗಿ ಮಹಾರಾಷ್ಟ್ರಕ್ಕೆ ಅಪ್ಪಳಿಸಿ ಹಾನಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇಂದು ಎರಡು ಗಂಟೆಯ ವರದಿ ಪ್ರಕಾರ ಚಂಡಮಾರುತ ಆಗಿದೆ. ಇದರಿಂದ ಗಾಳಿಯ ವೇಗ ಗಂಟೆಗೆ 60 ರಿಂದ 70 ಕಿಲೋ ಮೀಟರ್ ವೇಗದಲ್ಲಿದೆ. ನಾಳೆ ರಾತ್ರಿ ವೇಳೆಗೆ ಇದರ ಪರಿಣಾಮ ಹೆಚ್ಚಿರಲಿದೆ. ಮುಂಬೈ ಮೂಲಕ ಹಾದುಹೋಗುವ ಸಾಧ್ಯತೆ ಇದ್ದು, ಗುರುವಾರದ ವೇಳೆಗೆ ಮುಂದೆ ಚಲಿಸಿ ತೀವ್ರತೆ ಕಡಿಮೆಯಾಗಲಿದೆ ಎಂದರು.
ಈ ಚಂಡಮಾರುತದಿಂದ ರಾಜ್ಯಕ್ಕೆ ಅಷ್ಟೇನು ಅಪಾಯವಿಲ್ಲ. ಕಳೆದ ಎರಡು ದಿನಗಳಿಂದ ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆ, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕರಾವಳಿ ಜಿಲ್ಲೆಯಲ್ಲೂ ಆರೆಂಜ್ ಅಲರ್ಟ್ ಘೋಷಿಸಿದ್ದು, ಉತ್ತಮ ಮಳೆಯಾಗುತ್ತಿದೆ. ಬೆಳಗಾವಿ, ವಿಜಯಪುರ, ಗದಗ, ಬಾಗಲಕೋಟೆ, ಧಾರವಾಡ, ಹಾವೇರಿ ಜಿಲ್ಲೆಯಲ್ಲೂ ಇಂದು ಸಾಧಾರಣದಿಂದ ಕೂಡಿದ ಭಾರೀ ಮಳೆಯಾಗಲಿದೆ. ನಾಳೆಯಿಂದ ಮಳೆ ತೀವ್ರತೆ ಕಡಿಮೆ ಆಗಿ ಸಾಧಾರಣ ಮಳೆಯಾಗಲಿದೆ ಎಂದು ವಿವರಿಸಿದರು.
ಚಂಡಮಾರುತ ನಾಳೆ ಮಹಾರಾಷ್ಟ್ರದಲ್ಲಿ ಅಪ್ಪಳಿಸುವುದರಿಂದ ತೀವ್ರತೆ ಹೆಚ್ಚಾಗಿರಲಿದೆ. ಅನಾಹುತ ಆಗುವ ಸಾಧ್ಯತೆ ಇದೆ. ನಮ್ಮ ರಾಜ್ಯದಲ್ಲಿ ಸಮುದ್ರದ ಉಬ್ಬರ ಹೆಚ್ಚಿಲ್ಲ. ಆದರೂ, ಜಿಲ್ಲಾಡಳಿತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ತಿಳಿಸಿದೆ. ಜೊತೆಗೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಐದನೇ ತಾರೀಕಿನ ಬಳಿಕ ಸಮುದ್ರದ ಉಬ್ಬರ ಕಡಿಮೆಯಾಗಲಿದೆ ಎಂದರು.
ಡ್ಯಾಂಗಳು ಖಾಲಿ ಇರುವುದರಿಂದ, ಮಹಾರಾಷ್ಟ್ರ ಭಾಗದಿಂದ ನೀರಿನ ಹರಿವು ಹೆಚ್ಚಾದರೂ ರಾಜ್ಯಕ್ಕೆ ಸಮಸ್ಯೆಯಾಗುವುದಿಲ್ಲ, ಜಲಾಶಯಗಳಲ್ಲಿ ನೀರು ತುಂಬಿಕೊಳ್ಳಲಿದೆ. ಮಾನ್ಸೂನ್ ನಾಳೆ ನಮ್ಮ ರಾಜ್ಯಕ್ಕೆ ಪ್ರವೇಶಿಸಲಿದೆ. ಈ ವರ್ಷದ ಮುಂಗಾರು ವಾಡಿಕೆಗಿಂತ ಉತ್ತಮ ಮಳೆಯಾಗಲಿದೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದರು.