ದೊಡ್ಡಬಳ್ಳಾಪುರ : ಕೊರೊನಾ ಮೂರನೇ ಅಲೆ ಪ್ರಾರಂಭವಾಗಿದ್ದು, ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ. ಸರ್ಕಾರ ಲಾಕ್ಡೌನ್ ಮಾಡುವ ಹಂತದಲ್ಲಿದೆ. ಆದರೆ, ಇದ್ಯಾವುದರ ಪರಿಜ್ಞಾನವೇ ಇಲ್ಲದೆ ದೊಡ್ಡಬಳ್ಳಾಪುರದಿಂದ ಸಾವಿರಾರು ಸಂಖ್ಯೆಯಲ್ಲಿ ತಮಿಳುನಾಡಿನ ಮೇಲ್ ಮಾವತ್ತೂರಿನ ಓಂ ಶಕ್ತಿ ದೇವಾಲಯದ ಪ್ರವಾಸಕ್ಕೆ ಹೋಗಿ ಬರುತ್ತಿದ್ದಾರೆ. ಇದನ್ನ ಕಂಡು ಕಾಣದಂತೆ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ ಎಂಬ ಆರೋಪ ಕೇಳಿ ಬಂದಿದೆ.
ತಮಿಳುನಾಡಿನ ಮೇಲ್ ಮಾವತ್ತೂರಿನ ಓಂ ಶಕ್ತಿ ದೇವಾಲಯಕ್ಕೆ ಮಾಲೆ ಧರಿಸಿದ ಮಹಿಳೆಯರು ಪ್ರವಾಸಕ್ಕೆ ಹೋಗುವ ಸಂಪ್ರದಾಯ ಇದೆ. ಬಡ ಭಕ್ತರಿಗೆ ಅನುಕೂಲ ಮಾಡಿಕೊಡುವ ಕಾರಣಕ್ಕೆ ಬಿಜೆಪಿ ಯುವ ಮುಖಂಡರಾದ ಧೀರಜ್ ಮುನಿರಾಜು ತಮ್ಮ ಸ್ವಂತ ಹಣದಲ್ಲಿ ತಾಲೂಕಿನ ಓಂ ಶಕ್ತಿ ಭಕ್ತರನ್ನ ತಮಿಳುನಾಡು ಮೇಲ್ ಮಾವತ್ತೂರಿಗೆ ಕಳುಹಿಸಿ ಕೊಡುತ್ತಿದ್ದಾರೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಮಾಲಾಧಾರಿಗಳನ್ನು ತಂಡ ತಂಡವಾಗಿ ಕಳುಹಿಸುತ್ತಿದ್ದಾರೆ. ಡಿಸೆಂಬರ್ 10 ರಿಂದ ಓಂ ಶಕ್ತಿ ದೇವಾಲಯದ ಪ್ರವಾಸಕ್ಕೆ ಕಳುಹಿಸಿದ್ದು ಈಗಾಗಲೇ 85 ಬಸ್ಗಳಲ್ಲಿ 5 ಸಾವಿರಕ್ಕೂ ಹೆಚ್ಚು ಭಕ್ತರನ್ನು ಕಳುಹಿಸಲಾಗಿದೆ. ಜನವರಿ 15ರ ವರೆಗೂ ಭಕ್ತರನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದು, ಇನ್ನೂ 5 ಸಾವಿರಕ್ಕೂ ಹೆಚ್ಚು ಭಕ್ತರು ತಮಿಳುನಾಡು ಪ್ರವಾಸಕ್ಕೆ ಹೊರಡಲು ಸಿದ್ದತೆ ನಡೆಸಿದ್ದಾರೆ.
ದೇಶದ್ಯಾಂತ ಕೊರೊನಾ 3ನೇ ಅಲೆಯ ಆತಂಕ ಶುರುವಾಗಿದ್ದು, ತಮಿಳುನಾಡಿನಲ್ಲಿ 3ನೇ ಅಲೆ ವೇಗವನ್ನು ಪಡೆದು ಕೊಂಡಿದೆ. ಮಂಡ್ಯ ಜಿಲ್ಲೆಯಿಂದ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಭೇಟಿ ನೀಡಿ ಬಂದಿದ್ದ 30 ಕ್ಕೂ ಹೆಚ್ಚು ಭಕ್ತರಿಗೆ ಕೊರೊನಾ ಸೋಂಕು ಧೃಡಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂತಹ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನಿಂದ ಈಗಾಗಲೇ 5 ಸಾವಿರಕ್ಕೂ ಹೆಚ್ಚು ಭಕ್ತರು ಓಂ ಶಕ್ತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಮತ್ತೆ 5 ಸಾವಿರ ಭಕ್ತರು ಪ್ರವಾಸಕ್ಕೆ ಸಿದ್ದತೆ ನಡೆಸಿದ್ದಾರೆ, ಪ್ರವಾಸಕ್ಕೆ ತಾಲೂಕು ಆಡಳಿತದಿಂದ ಅನುಮತಿ ಸಹ ಅಯೋಜಕರು ಪಡೆದಿಲ್ಲ ಜೊತೆಗೆ ಪ್ರವಾಸದಿಂದ ಹಿಂದುರುಗಿದವರನ್ನ ಕೊರೊನಾ ಪರೀಕ್ಷೆ ಸಹ ಮಾಡದಿರುವುದು ಆತಂಕಕ್ಕೆ ಕಾರಣವಾಗಿದೆ.
ಆ ದೇವಿಯೇ ಕಾಪಾಡ್ತಾಳೆ
ಇನ್ನೂ ಪ್ರವಾಸಕ್ಕೆ ಹೊರಟ್ಟಿರುವ ಭಕ್ತರನ್ನು ಮಾತನಾಡಿಸಿದಾಗ ನಾವೇಲ್ಲ ಡಬಲ್ ಡೋಸ್ ಲಸಿಕೆ ಪಡೆದು ಕೊಂಡಿದ್ದೇವೆ. ಕೊರೊನಾ ಬರದಂತೆ ಆ ತಾಯಿಯೇ ಕಾಪಾಡುತ್ತಾಳೆಂದು ತಮ್ಮ ಮುಗ್ಧ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ.
ಓಂ ಶಕ್ತಿ ಭಕ್ತರಿಗೆ ಉಚಿತ ಪ್ರವಾಸವನ್ನ ಕಲ್ಪಿಸಿರುವುದು ಯುವ ಬಿಜೆಪಿ ಮುಖಂಡರಾದ ಧೀರಜ್ ಮುನಿರಾಜು. ದೊಡ್ಡಬಳ್ಳಾಪುರದಲ್ಲಿ ರಾಜಕೀಯವಾಗಿ ಬೆಳೆಯುವ ಆಸೆಯನ್ನಿಟ್ಟುಕೊಂಡಿರುವ ಅವರು ಈಗಾಗಲೇ ಹಲವು ಸಮಾಜ ಸೇವೆ ಮಾಡಿದ್ದಾರೆ. ಆದರೆ, ಕೊರೊನಾ ಉಲ್ಬಣಗೊಳ್ಳುತ್ತಿರುವ ಸಮಯದಲ್ಲಿ ತಮಿಳುನಾಡಿನ ಪ್ರವಾಸಕ್ಕೆ ಭಕ್ತರನ್ನ ಕಳುಹಿಸುತ್ತಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಓಂ ಶಕ್ತಿ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿದ ಧೀರಜ್ ಮುನಿರಾಜು, ಓಂ ಶಕ್ತಿ ಭಕ್ತರಿಂದ ಬೇಡಿಕೆ ಬಂದ ಹಿನ್ನೆಲೆ ಪ್ರವಾಸಕ್ಕೆ ಕಳಿಸಲಾಗುತ್ತಿದೆ. ಡಬಲ್ ಡೋಸ್ ಪಡೆದ ಭಕ್ತರನ್ನು ಮಾತ್ರ ಪ್ರವಾಸಕ್ಕೆ ಕಳಿಸುತ್ತಿದ್ದು, ಕೇವಲ ಓಂ ಶಕ್ತಿ ದೇವಾಲಯಕ್ಕೆ ಮಾತ್ರ ಕಳಿಸಲಾಗುತ್ತಿದೆ. ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ ಜಾರಿಯಾದರೆ ಪ್ರವಾಸ ಸ್ಥಗಿತ ಮಾಡುವುದಾಗಿ ಹೇಳಿದ್ದಾರೆ.
ಪ್ರತಿಯೊಬ್ಬರೂ ಮಾರ್ಗಸೂಚಿ ಅನುಸರಿಸಬೇಕು: ಶಾಸಕರು
ತಮ್ಮ ಕ್ಷೇತ್ರದಲ್ಲಿನ ಓಂ ಶಕ್ತಿ ಪ್ರವಾಸದ ಬಗ್ಗೆ ಮಾತನಾಡಿದ ಶಾಸಕರಾದ ಟಿ. ವೆಂಕಟರಮಣಯ್ಯ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿ ಬರವುದರಿಂದ ಕೊರೊನಾ ವೇಗವಾಗಿ ಹರಡುತ್ತದೆ. ಸರ್ಕಾರದ ಮಾರ್ಗಸೂಚಿಯನ್ನ ಪ್ರತಿಯೊಬ್ಬರು ಅನುಸರಿಸಬೇಕು. ಓಂ ಶಕ್ತಿ ಪ್ರವಾಸದ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಕ್ಕೆ ಓಂ ಶಕ್ತಿ ಪ್ರವಾಸಕ್ಕೆ ಹೋಗಿ ಬರುತ್ತಿರುವ ಮಾಹಿತಿಯೇ ಇಲ್ಲ. ಮಂಡ್ಯದಿಂದ ಓಂ ಶಕ್ತಿ ದೇವಾಲಯಕ್ಕೆ ಹೋಗಿ ಬಂದ 30 ಕ್ಕೂ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಪ್ರವಾಸದಿಂದ ಬಂದವರು ಕೊರೊನಾ ಪರೀಕ್ಷೆ ಮಾಡಿಸುವ ವ್ಯವಸ್ಥೆ ಮಾಡದಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತಿದೆ.