ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಡಾ ಗಿರೀಶ್ ನಾಶಿ ಪರ ಪ್ರಚಾರ ನಡೆಸಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು, ಅನರ್ಹರ ವಿರುದ್ಧ ಗುಡುಗಿದರು. ಸುಪ್ರೀಂಕೋರ್ಟ್ ಅನರ್ಹರಿಗೆ ಕಪಾಳಮೋಕ್ಷ ಮಾಡಿದೆ. ಇದು ಮೇಲಿರುವವರಿಗೂ ಮನವರಿಕೆ ಆಗಿದೆ ಎಂದರು.
ಶನೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಸಿ ಸಲ್ಲಿಸಿದ ಬಳಿಕ ರೋಡ್ ಶೋ ಆರಂಭಿಸಿದ ಅವರು, 'ಬನ್ನಿ ದೇವಸ್ಥಾನದ ಮುಂದೆ ಎದೆ ಮುಟ್ಟಿಕೊಂಡು ನಮ್ಮ ಸರ್ಕಾರದಲ್ಲಿ ಅನ್ಯಾಯವಾಗಿದೆ ಎನ್ನಲಿ, ಆಣೆ ಮಾಡಲಿ ಎಂದು ಬಿಜೆಪಿ ಅಭ್ಯರ್ಥಿ ಗೋಪಾಲಯ್ಯಗೆ ಸವಾಲು ಹಾಕಿದ್ರು.
ಗೋಪಾಲಯ್ಯ ವಿರುದ್ಧ ಗರಂ ಆದ ದೊಡ್ಡಗೌಡರು, ನಾನು ಬರೀ ರೋಡ್ ಶೋ ಮೂಲಕ ತಮಾಷೆ ಮಾಡೋಕೆ ಬಂದಿಲ್ಲ. ಎಷ್ಟು ಕೋಟಿ ದುಡ್ಡು ಇಟ್ಕೊಂಡ್ರು ಏನು ಪ್ರಯೋಜನ ಇಲ್ಲ. ಹೆಚ್ಡಿಕೆ ಸಿಎಂ ಆಗಿದ್ದಾಗ ಎಷ್ಟು ಅನುದಾನ ಕೊಟ್ರು ಅನ್ನೋದನ್ನು ಎಲ್ಲಾ ತಿಳಿಸ್ತೇನೆ. ಹೆಚ್ ಡಿ ರೇವಣ್ಣ ಎಷ್ಟು ಅನುದಾನ ಕೊಟ್ರು. ಬಿಬಿಎಂಪಿ ಇಂದ ಎಷ್ಟು ಅನುದಾನ ಬಂತು. ಈ ದುಡ್ಡೆಲ್ಲ ಎಲ್ಲಿ ಹೊಯ್ತು ಅಂತ ಇಲ್ಲಿನ ಬಿಜೆಪಿ ಅಭ್ಯರ್ಥಿ ಹೇಳಲಿ ಎಂದು ಆಗ್ರಹಿಸಿದರು. ಈಗ ಅಭಿವೃದ್ಧಿಗೋಸ್ಕರ ಬಿಜೆಪಿಗೆ ಹೋಗಿದ್ದೇನೆ ಅಂತಾರೆ. ಕುಮಾರಸ್ವಾಮಿ ಯಾವುದೇ ಅನುದಾನ ಕೊಟ್ಟಿಲ್ಲ ಅಂತ ಇಲ್ಲಿರುವ ಶನೀಶ್ವರ ದೇವಸ್ಥಾನದ ಮುಂದೆ ಬಂದು ಪ್ರಮಾಣ ಮಾಡಿ ಗೋಪಾಲಯ್ಯಗೆ ಬಹಿರಂಗ ಸವಾಲು ಹಾಕಿದ್ರು.
ಇನ್ನು, ಕುಮಾರಸ್ವಾಮಿ ಅವರ ಕಣ್ಣೀರಿನ ಬಗ್ಗೆ ಟೀಕಿಸಿದ ಸದಾನಂದ ಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿಡಿ, ಸುಪ್ರೀಂ ಕೋರ್ಟ್ನಿಂದ ಅನರ್ಹ ಶಾಸಕರ ಪ್ರಕರಣ ಮತ್ತು ಮಹಾರಾಷ್ಟ್ರ ಸರ್ಕಾರ ರಚನೆ ವಿಷಯದಲ್ಲೂ ಸದಾನಂದ ಗೌಡರಿಗೆ ಮಾತ್ರವಲ್ಲ. ಇಡೀ ಬಿಜೆಪಿಗೇ ಕಪಾಳ ಮೋಕ್ಷವಾಗಿದೆ ಎಂದು ತಿರುಗೇಟು ನೀಡಿದ್ರು.
ಮಹಾಲಕ್ಷ್ಮಿ ಲೇಔಟ್ ನಲ್ಲಿ ಚುನಾವಣೆಗೆ ನಾನೇ ನಿಂತಿದ್ದೇನೆ. ಇಲ್ಲಿನ ಶಾಸಕರು ಇದು ಎರಡನೇ ಸಾರಿ ಮೋಸ ಮಾಡಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡು, ಅವರಿಗೆ ಶಕ್ತಿ ಕೊಟ್ಟಿದ್ದೆವು. ಅವರ ಮನೆಯವರನ್ನೇ ಉಪಮೇಯರ್ ಮಾಡಿದ್ವಿ. ಕಳೆದ ನಾಲ್ಕು ವರ್ಷಗಳಲ್ಲಿ ಒಂದಲ್ಲ ಒಂದು ಸ್ಥಾನಮಾನ ಕೊಟ್ಟಿದ್ದೆವು. ಈ ಕ್ಷೇತ್ರಕ್ಕೆ ಕೊಟ್ಟಿರುವ ಹಣ ಎಷ್ಟು ಕೋಟಿಗಳು ಅಂತ ಅವರೇ ಹೇಳಬೇಕು. ಹತ್ತು ವರ್ಷಗಳಲ್ಲಿ ಕೊಟ್ಟಿರುವ ಹಣದಲ್ಲೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಅದಕ್ಕೆ ಬಿಜೆಪಿಗೆ ಸೇರ್ತಾ ಇದ್ದೇನೆ ಅಂತ ಹೇಳುವ ಅಭ್ಯರ್ಥಿ ಗೆ ವೋಟ್ ಹಾಕುವ ಮುನ್ನ ಹತ್ತು ಬಾರಿ ಯೋಚನೆ ಮಾಡಿ. ನನ್ನ ಪಕ್ಷಕ್ಕೆ ಇಲ್ಲಿ ಜಾತಿ ಮುಖ್ಯವಲ್ಲ ಎಂದು ದೇವೇಗೌಡರು ಹೇಳಿದ್ರು.
ಬಳಿಕ ವೆಸ್ಟ್ ಆಫ್ ಕಾರ್ಡ್ ರಸ್ತೆ, ನಾಗಪುರ ಹಾಗೂ ಕುರುಬರಹಳ್ಳಿಯಲ್ಲಿ ರೋಡ್ ಶೋ ನಡೆಸಿದರು. ಅಭ್ಯರ್ಥಿ ಗಿರೀಶ್ ಕೆ ನಾಶಿ, ಮಾಜಿ ಉಪಮೇಯರ್ ಭದ್ರೇಗೌಡ ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು.