ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ ಸಾಮಾಜಿಕ ಜಾಲಾತಾಣ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವಿಯ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ತಮ್ಮ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ಅಮಿತ್ ಮಾಳವಿಯ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಅರ್ಜಿದಾರರ ಹೇಳಿಕೆಯಿಂದ ಯಾವುದೇ ರೀತಿಯಲ್ಲಿಯೂ ಸಮಾಜದಲ್ಲಿ ಗೊಂದಲವನ್ನುಂಟು ಮಾಡುವಂತಹ ಅಂಶ ಇಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ಮುಂದುವರೆದಲ್ಲಿ ಕಾನೂನಿನ ದುರ್ಬಳಕೆ ಮಾಡಿಕೊಂಡಂತಾಗುತ್ತದೆ ಎಂದು ಅಭಿಪ್ರಾಯಪಟ್ಟು ತನಿಖೆಗೆ ತಡೆ ನೀಡಿ ಆದೇಶಿಸಿದೆ. ಅಲ್ಲದೆ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ವಕೀಲರ ತೇಜಸ್ವಿ ಸೂರ್ಯ, ಅರ್ಜಿದಾರರ ವಿರುದ್ಧ ದಾಖಲಾಗಿರುವ ಇಡೀ ದೂರಿನಲ್ಲಿ ಐಪಿಸಿ 153(ಎ)ಅನ್ನು ಸೇರಿಸಲಾಗಿದೆ. ಆದರೆ, ಅವರ ದೂರಿನ ಇಡೀ ಸಾರಾಂಶವನ್ನು ಪರಿಶೀಲಿಸಿದಲ್ಲಿ ಧರ್ಮ, ವಾಸ ಸ್ಥಳ, ಮತ್ತು ಭಾಷೆಯ ಆಧಾರದಲ್ಲಿ ಎರಡು ವರ್ಗಗಳ ಗೊಂದಲ ಸೃಸ್ಟಿಸುವಂತಹ ಅಂಶಗಳಿಲ್ಲ. ಹೀಗಾಗಿ ಪ್ರಕರಣಕ್ಕೆ ರದ್ದು ಪಡಿಸಬೇಕು ಎಂದು ವಾದ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಬೆಳ್ಳಿಯಪ್ಪ, ತನಿಖೆ ನಡೆದು ವರದಿ ಸಲ್ಲಿಸಲಿ, ಅಲ್ಲಿಯವರೆಗೂ ಪ್ರಕರಣದ ವಿಚಾರಣೆ ನಡೆಯಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಿ ಎಂದು ತಿಳಿಸಿತು.
ಪ್ರಕರಣದ ಹಿನ್ನೆಲೆ ಏನು?: ಜೂನ್ 17ರಂದು ಅಮಿತ್ ಮಾಳವಿಯಾ ಅವರು ಟ್ವೀಟ್ ಮಾಡಿ, ಅನಿಮೇಷನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅಲ್ಲದೆ, ರಾಹುಲ್ ಗಾಂಧಿ ಅವರು ವಿದೇಶದಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದಿಂದ ದೇಶವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಲ್ಲದೆ, ಇಸ್ಲಾಮಿಕ್ ನಂಬಿಕೆ ಜನರೊಂದಿಗೆ ರಾಹುಲ್ ಗಾಂಧಿ ಅವರು ನಡೆಸಿದ ಸಂವಾದವನ್ನು ಅನಿಮೇಷನ್ ಮೂಲಕ ತಪ್ಪಾಗಿ ನಿರೂಪಿಸಿದ್ದು, ಇದು ಜನರ ನಡುವೆ ದ್ವೇಷವನ್ನು ಉಂಟು ಮಾಡುವ ಸಾಧ್ಯತೆಯಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರಲಿದೆ. ಜತೆಗೆ, ಈ ಅಂಶ ಸಮಾಜವನ್ನು ಪ್ರಚೋದನೆಗೊಳಿಸಲಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಜತೆಗೆ, ಈ ರೀತಿಯ ಟ್ವೀಟ್ ಮಾಡಿರುವ ಅಮಿತ್ ಮಾಳವಿಯಾ ಅವರ ವಿರುದ್ಧ ಐಪಿಸಿ 153ಎ (ವಿವಿಧ ಗುಂಪುಗಳ ನಡುವೆ ಜನ್ಮ ಸ್ಥಳ, ಧರ್ಮ, ಭಾಷೆಯ ಆಧಾರದಲ್ಲಿ ದ್ವೇಷವನ್ನುಂಟು ಮಾಡಿ ಶಾಂತಿ ಸೌಹಾರ್ದತೆಗೆ ಧಕ್ಕೆ ತರುವುದು.) 120ಬಿ (ಅಪರಾಧಿಕ ಒಳಸಂಚಿಗೆ ಶಿಕ್ಷೆ) 505(ಸಾರ್ವಜನಿಕವಾಗಿ ಕೇಡುಂಟು ಮಾಡುವುದು) ಆರೋಪಗಳ ಅಡಿಯಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ 2023ರ ಜೂನ್ 19 ರಮೇಶ್ ಬಾಬು ದೂರು ನೀಡಿದ್ದರು. ಈ ಪ್ರಕರಣ ರದ್ದು ಕೋರಿ ಅಮಿತ್ ಮಾಳವಿಯಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕದತಟ್ಟಿದ ರಾಹುಲ್ ಗಾಂಧಿ