ಬೆಂಗಳೂರು : ಮೈಸೂರು ಜಿಲ್ಲಾಧಿಕಾರಿ ನಿವಾಸ ನವೀಕರಣ ಹಾಗು ಬಟ್ಟೆ, ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಇಲಾಖಾ ತನಿಖೆಗೆ ಸರ್ಕಾರ ಆದೇಶಿಸಿದೆ.
ಈ ಪ್ರಕರಣ ಸಂಬಂಧ ಈಗಾಗಲೇ ಪ್ರಾಥಮಿಕ ತನಿಖೆ ನಡೆದಿದೆ. ನವೆಂಬರ್ 24, 2022ರಂದು ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ರೋಹಿಣಿ ನೀಡಿದ ಉತ್ತರ ಸಮರ್ಪಕವಾಗಿರಲಿಲ್ಲ ಹಾಗು ಸಂಬಂಧಿತ ದಾಖಲೆಗಳನ್ನೂ ನೀಡಿರಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಸರ್ಕಾರ ಇದೀಗ ಇಲಾಖಾ ತನಿಖೆ ನಡೆಸಲು ನಿರ್ಧಸಿರಿದೆ.
ನಿವೃತ್ತ ಐಎಎಸ್ ಅಧಿಕಾರಿ ಯೋಗೇಂದ್ರ ತ್ರಿಪಾಠಿ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದೆ. ಶೀಘ್ರ ಪ್ರಕರಣ ಸಂಬಂಧ ವಿಸ್ತೃತ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ಪಾರಂಪರಿಕ ಕಟ್ಟಡವಾದ ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ನಿಯಮ ಮೀರಿ ಈಜು ಕೊಳ ಹಾಗೂ ನವೀಕರಣ ಕಾಮಗಾರಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಇದಲ್ಲದೇ ಬಟ್ಟೆ, ಬ್ಯಾಗ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಿಸಲಾಗಿದೆ. ಇದರ ಪ್ರಾಥಮಿಕ ತನಿಖೆಯಲ್ಲಿ ರೋಹಿಣಿ ಸಿಂಧೂರಿಗೆ ತಮ್ಮ ವಿರುದ್ಧ ಕೇಳಿಬಂದ ಆರೋಪದ ಬಗ್ಗೆ ಉತ್ತರ ನೀಡಲು ತಿಳಿಸಲಾಗಿತ್ತು. ಮೇ 4, 2023 ರಂದು ಸಿಂಧೂರಿ ಉತ್ತರಿಸಿದ್ದರು. ರಾಜ್ಯ ಸರ್ಕಾರವು ರೋಹಿಣಿ ನೀಡಿದ ಉತ್ತರವನ್ನು ಪರಿಶೀಲಿಸಿದ್ದು, ಸ್ಪಷ್ಟೀಕರಣ ತೃಪ್ತಿದಾಯಕವಾಗಿರದ ಕಾರಣ ಇಲಾಖಾ ತನಿಖೆ ನಡೆಸಲು ತೀರ್ಮಾನಿಸಿದೆ.
ಇದನ್ನೂ ಓದಿ : IPS ಅಧಿಕಾರಿ ಡಿ.ರೂಪ ವಿರುದ್ಧದ ಮಾನಹಾನಿ ಪ್ರಕರಣ ರದ್ಧತಿಗೆ ಹೈಕೋರ್ಟ್ ನಿರಾಕರಣೆ