ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಖಡಕ್ ಎಚ್ಚರಿಕೆ ನೀಡಿದರು.
ಬೆಂಗಳೂರಿನಿಂದಲೇ ಇಂದು ವಿಡಿಯೋ ಸಂವಾದದ ಮೂಲಕ ಬೆಳಗಾವಿ ವಿಭಾಗದ ಸಮಾಜ ಕಲ್ಯಾಣ ಇಲಾಖೆ ಹಾಗೂ ಇಲಾಖಾ ವ್ಯಾಪ್ತಿಯ ನಿಗಮಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಇಲಾಖೆಯ ಎಲ್ಲಾ ಕಚೇರಿಗಳು ಕಾರ್ಪೋರೇಟ್ ಕಚೇರಿಗಳಂತೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಇಲಾಖೆಯ ಪ್ರತಿಷ್ಠಿತ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಸಮುದಾಯದ ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರಕುವಂತೆ ಕ್ರಮ ಕೈಗೊಳ್ಳಬೇಕು. ಇಲಾಖೆಯ ಆಶಯ ಸಾಕರಗೊಂಡತಾಗುತ್ತದೆ. ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಪ್ರವಾಸ ಕೈಗೊಂಡು, ಪ್ರಗತಿ ಪರಿಶೀಲನೆ ನಡೆಸಬೇಕು. ಮುಂಗಡ ಪ್ರವಾಸ ವಿವರವನ್ನು ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸಿ, ನಂತರ ಅನುಸರಣ ವರದಿಯೊಂದಿಗೆ ದಿನಚರಿಯನ್ನು ಕಳುಹಿಸಬೇಕು ಎಂದು ಅವರು ನಿರ್ದೇಶಿಸಿದರು.
ಪ್ರತಿಯೊಂದು ಗ್ರಾಮಕ್ಕೂ ರುದ್ರಭೂಮಿಯನ್ನು ಒದಗಿಸಬೇಕು. ರುದ್ರಭೂಮಿಗಳಿಲ್ಲದ ಗ್ರಾಮಗಳ ಪ್ರಸ್ತಾವನೆಯನ್ನು ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಬೇಕು. ರುದ್ರಭೂಮಿಗಳು ಗ್ರಾಮಗಳಿಂದ ಬಹಳ ದೂರ ಇರುವ ಬಗ್ಗೆ ದೂರುಗಳು ಬಂದಿವೆ. ಗ್ರಾಮಗಳಿಗೆ ಸಮೀಪದಲ್ಲಿದ್ದರೆ ಅನುಕೂಲವಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದರು.
ಪರಿಶಿಷ್ಟ ಫಲಾನುಭವಿಗಳಿಗೆ ಬ್ಯಾಂಕ್ಗಳ ಸಾಲ ನೀಡದಿರುವುದರ ಬಗ್ಗೆ ದೂರುಗಳು ಬಂದಿವೆ. ಸುಲಲಿತವಾಗಿ ಸಾಲ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಇಲಾಖೆಯ ನಿಗಮಗಳ ಮೂಲಕ ಶೇ.50 ರಷ್ಟು ನೇರ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಐರಾವತ ಯೋಜನೆಯಡಿ ಉದ್ಯೋಗ ದೊರಕುವಂತಹ, ಜೀವನೋಪಾಯಕ್ಕೆ ಅನುಕೂಲವಾಗುವಂತಹ ಗೂಡ್ಸ್ ವಾಹನ, ಪ್ರಯಾಣಿಕರನ್ನು ಸಾಗಿಸಲು ಅನುಕೂಲವಾಗುವಂತಹ ವಾಹನಗಳ ಪ್ರಸ್ತಾವನೆಗಳಿಗೆ ಮಂಜೂರಾತಿ ನೀಡಬೇಕು. ಶುಲ್ಕ ಮರುಪಾವತಿ ದೊರಕದಿರುವ ಬಗ್ಗೆಯೂ ದೂರುಗಳು ಬಂದಿವೆ. ಎಷ್ಟು ಪ್ರಮಾಣದ ಶುಲ್ಕವನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಬೇಕು, ಎಷ್ಟು ಪ್ರಮಾಣದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಬೇಕು ಎನ್ನುವ ವಿವರವನ್ನು ಸಂಗ್ರಹಿಸಿ, ಕೂಡಲೇ ಶುಲ್ಕ ಮರುಪಾವತಿ ಮಾಡಬೇಕು ಎಂದರು.
ಕಾಲೋನಿ ಅಭಿವೃದ್ಧಿ ಯೋಜನೆಯಡಿ ಕೆಲವೆಡೆ ಪ್ರಗತಿ ಕುಂಠಿತವಾಗಿದೆ. ಸಮರ್ಪಕವಾಗಿ ಅನುಷ್ಠಾನ ಮಾಡದ ಸಂಸ್ಥೆಯಿಂದ ಅನುದಾನ ಹಿಂಪಡೆದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಅಥವಾ ಲೋಕೋಪಯೋಗಿ ಇಲಾಖೆಗೆ ವಹಿಸಬೇಕು. ಪ್ರತಿ ಕಾಲೋನಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ವಸತಿ ನಿಲಯಗಳ ದುರಸ್ಥಿ, ಶಾಲಾ ಕೊಠಡಿಗಳ ದುರಸ್ಥಿ ಸೇರಿದಂತೆ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 500 ಕೋಟಿ ರೂ. ಅನುದಾನವಿದೆ. ಆದರೆ ಖರ್ಚಾಗಿಲ್ಲ. 2,600 ಕ್ಕೂ ಹೆಚ್ಚು ಸಮುದಾಯ ಭವನಗಳು ಪೂರ್ಣಗೊಂಡಿವೆ. ಕೆಲವು ಪ್ರಗತಿ ಹಂತದಲ್ಲಿವೆ. ನಿವೇಶನ ಇಲ್ಲದೇ ಮಂಜೂರಾತಿ ನೀಡಿದ ಪ್ರಸ್ತಾವನೆಗಳನ್ನು ರದ್ದುಪಡಿಸಿ, ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ಜೀವನೋಪಾಯ ನಡೆಸುತ್ತಿರುವವರ ವಿವರವನ್ನು ಸಂಗ್ರಹಿಸಬೇಕು. ಯೋಜನೆಗಳು ಸದ್ಬಳಕೆಯಾಗುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಫಲಾನುಭವಿಗಳು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.