ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪವಿಭಾಗಾಧಿಕಾರಿ ಕಚೇರಿ ದೊಡ್ಡಬಳ್ಳಾಪುರ ನಗರದಲ್ಲಿದೆ. ಇದರಿಂದಾಗಿ ಹೊಸಕೋಟೆ ಮತ್ತು ದೇವನಹಳ್ಳಿಯ ರೈತರಿಗೆ ದೂರವಾಗಿದ್ದು, ದೇವನಹಳ್ಳಿಯಲ್ಲಿ 2ನೇ ಉಪವಿಭಾಗಾಧಿಕಾರಿ ಕಚೇರಿ ಸ್ಥಾಪಿಸಬೇಕೆನ್ನುವುದು ದೇವನಹಳ್ಳಿ ಮತ್ತು ಹೊಸಕೋಟೆ ಭಾಗದ ರೈತರ ಬೇಡಿಕೆಯಾಗಿದೆ.
ಬೆ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕೇಂದ್ರದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಆರಂಭಿಸುವಂತೆ ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನಿ) ತಾಲೂಕು ಘಟಕದ ಅಧ್ಯಕ್ಷ ಕಾರಹಳ್ಳಿ ಕೆಂಪಣ್ಣ ಒತ್ತಾಯಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿದ್ದ ಉಪ ವಿಭಾಗಾಧಿಕಾರಿ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಇದರ ವಿರುದ್ಧ ದೇವನಹಳ್ಳಿ ತಾಲೂಕಿನ ಪ್ರಗತಿಪರ ಸಂಘಟನೆಗಳು ಹೋರಾಟ ತೀವ್ರಗೊಳಿಸಿದ ಪರಿಣಾಮ ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕು ಸೇರಿಸಿ ದೇವನಹಳ್ಳಿಯಲ್ಲಿ 2ನೇ ಉಪ ವಿಭಾಗಾಧಿಕಾರಿ ಕಚೇರಿ ಆರಂಭಿಸುವುದಾಗಿ ಅಂದಿನ ಆಡಳಿತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರು.
ಉಪವಿಭಾಗಾಧಿಕಾರಿ ಕಚೇರಿ ಸ್ಥಾಪನೆ ಸಂಬಂಧ ಭರವಸೆ ನೀಡಿ ಆರೇಳು ವರ್ಷ ಕಳೆದಿದೆ. ಆದರೆ ಭರವಸೆ ಮಾತ್ರ ಈಡೇರಿಲ್ಲ. ಹೊಸಕೋಟೆ ತಾಲೂಕು ಕೇಂದ್ರದಿಂದ ದೊಡ್ಡಬಳ್ಳಾಪುರದ ಉಪವಿಭಾಗಾಧಿಕಾರಿ ಕಚೇರಿಗೆ ಸಾಕಷ್ಟು ದೂರವಿದೆ. ಕಚೇರಿ ತಲುಪಲು ಬಸ್ ಕೊರತೆಯಿದೆ. ಹೊಸಕೋಟೆ ಮತ್ತು ದೇವನಹಳ್ಳಿ ಗ್ರಾಮಾಂತರ ಪ್ರದೇಶಗಳಿಂದ ನಿಗದಿತ ಸಮಯಕ್ಕೆ ತಮ್ಮ ಕೆಲಸಗಳಿಗೆ ತೆರಳಲು ರೈತರಿಗೆ ಕಷ್ಟವಾಗುತ್ತಿದೆ. ಮತ್ತು ಜಮೀನು ವ್ಯಾಜ್ಯಗಳಿಗೆ ಸಂಬಂಧಿಸಿದ ಕೇಸ್ಗಳಿಗೆ ದೊಡ್ಡಬಳ್ಳಾಪುರಕ್ಕೆ ಬರಬೇಕಾಗಿದೆ. ಆದರಿಂದ ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕಿಗೆ ಪ್ರತ್ಯೇಕ ಉಪವಿಭಾಗಾಧಿಕಾರಿ ಕಚೇರಿ ಸ್ಥಾಪಿಸಬೇಕೆನ್ನುವುದು ದೇವನಹಳ್ಳಿ ರೈತರ ಬೇಡಿಕೆಯಾಗಿದೆ ಎಂದು ಕಾರಹಳ್ಳಿ ಕೆಂಪಣ್ಣ ತಿಳಿಸಿದರು.
ದೇವನಹಳ್ಳಿ ರೈತರ ಬೇಡಿಕೆಗೆ ದೊಡ್ಡಬಳ್ಳಾಪುರದವರ ವಿರೋಧ ಇದೆ. ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ನಡೆಸಿದ ಪರಿಣಾಮ 1968ರಲ್ಲಿ ದೊಡ್ಡಬಳ್ಳಾಪುರಕ್ಕೆ ಉಪವಿಭಾಗಾಧಿಕಾರಿ ಕಚೇರಿ ಮಂಜೂರಾಗಿತ್ತು. ಆದರೆ ಕಚೇರಿ ಮಾತ್ರ ಬೆಂಗಳೂರಿನಲ್ಲಿ ಇತ್ತು. ನಂತರ 48 ದಿನಗಳ ಹೋರಾಟದ ಫಲ 6 ವರ್ಷಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಪ್ರಾರಂಭವಾಗಿದೆ. ಪುರಸಭೆಯಾಗಿರುವ ದೇವನಹಳ್ಳಿ ಜನ ಉಪವಿಭಾಗಾಧಿಕಾರಿ ಕಚೇರಿ ಕೇಳುತ್ತಿರುವುದು ನ್ಯಾಯಯುತವಾಗಿಲ್ಲ. ಇನ್ನೂ ತಿಂಗಳಲ್ಲಿ 4 ದಿನ ಪ್ರತಿ ತಾಲೂಕಿಗೂ ಉಪವಿಭಾಗಾಧಿಕಾರಿ ಭೇಟಿ ನೀಡುತ್ತಿದ್ದಾರೆ ಮತ್ತು ರೈತರ ಜಮೀನು ವ್ಯಾಜ್ಯಗಳ ಕೇಸ್ಗಳಲ್ಲಿ ಭಾಗಿಯಾಗುತ್ತಿರುವುದರಿಂದ ದೇವನಹಳ್ಳಿ ಮತ್ತು ಹೊಸಕೋಟೆ ಭಾಗದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂಬುದು ದೊಡ್ಡಬಳ್ಳಾಪುರ ಜನರ ವಾದ.