ಬೆಂಗಳೂರು: ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ 3 ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ, ಬಳಿಕ ನಿರ್ಧಾರ ಹಿಂಪಡೆದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯಲ್ಲಿ ನಡೆದ ರೈತ ಆಂದೋಲನದವನ್ನು ನಿಲ್ಲಿಸಿ ದೆಹಲಿ ಗಡಿಯಿಂದ ಅನ್ನದಾತರು ಹಿಂತಿರುಗಿದ ದಿನ ಇಂದು.
ಹೀಗಾಗಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯು ಇದನ್ನು ದೇಶಾದ್ಯಂತ ರೈತ ಹುತಾತ್ಮ ದಿನವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಸಂಚಾಲಕ ಕೆ ವಿ ಬಿಜು ಹೇಳಿದರು.
ಕೇಂದ್ರ ಸರ್ಕಾರದಿಂದ ರೈತರ 5 ಲಕ್ಷ ರೂ ಪರಿಹಾರ ಬಂದಿಲ್ಲ: ಕೇಂದ್ರ ಸರ್ಕಾರ ಹೋರಾಟದಲ್ಲಿ ಮಡಿದ ರೈತರಿಗೆ 5 ಲಕ್ಷ ರೂ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿತ್ತು. ಆದ್ರೆ ಇನ್ನೂ ಕೂಡ ಸಾವನ್ನಪ್ಪಿದ ಕುಟುಂಬಗಳ ರಕ್ಷಣೆ ಮಾಡಿಲ್ಲ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ರೂಪಿಸುತ್ತೇವೆ ಎಂದು ಹೇಳಿ, ಇನ್ನೂ ಜಾರಿ ಮಾಡಿಲ್ಲ, ಹೀಗೆ ರೈತರನ್ನು ವಂಚಿಸುವ ಕೆಲಸ ಆಗಬಾರದು ಎಂದರು.
ತೆಲಂಗಾಣ ಸರ್ಕಾರದಿಂದ 3 ಲಕ್ಷ ಪರಿಹಾರ: ಪ್ರತಿಭಟನೆಯಲ್ಲಿ ತೆಲಂಗಾಣ ರಾಜ್ಯದ ರೈತ ಮುಖಂಡ ವೆಂಕಟೇಶ್ವರ ರಾವ್ ಮಾತನಾಡಿ, ದೆಹಲಿ ರೈತ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ತೆಲಂಗಾಣ ಸರ್ಕಾರದ ಮುಖ್ಯಮಂತ್ರಿ ಕೆಸಿಆರ್ ಪ್ರತಿ ಕುಟುಂಬಕ್ಕೆ ಮೂರು ಲಕ್ಷದಂತೆ ಪರಿಹಾರ ನೀಡಿದ್ದಾರೆ, ಕೇಂದ್ರ ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಕಾರ್ಪೊರೇಟ್ ಸಂಸ್ಥೆಗಳ ಹಿತರಕ್ಷಣೆಗೆ ಹೆಚ್ಚು ಹೊತ್ತು ನೀಡುವುದು ಒಳ್ಳೆ ಬೆಳವಣಿಗೆ ಅಲ್ಲ. ದೇಶದ ರೈತರು ಬೆಳೆದ ಉತ್ಪನ್ನಗಳನ್ನು ಶ್ರೀಲಂಕಾ ಬಾಂಗ್ಲಾ ದೇಶಗಳಿಗೆ ದಾನ ಮಾಡುವ ನಮ್ಮ ಪ್ರಧಾನಿಗೆ ನಮ್ಮ ರೈತರ ಸಾವು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಬಂಡವಾಳಶಾಹಿಗಳಿಗೆ 10 ಲಕ್ಷ ಕೋಟಿ ಸಾಲ ಮನ್ನಾ: ರಾಜ್ಯ ರೈತ ಸಂಘಟನೆಗಳು ಒಕ್ಕೂಟ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ರಾಜ್ಯಗಳ ಮುಖ್ಯಸ್ಥ ಕುರುಬೂರು ಶಾಂತಕುಮಾರ್ ಮಾತನಾಡಿ, ಕಾರ್ಪೊರೇಟ್ ಕಂಪನಿಗಳಿಗೆ ಬಂಡವಾಳಶಾಹಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಸುಳ್ಳು ಭರವಸೆಗಳನ್ನು ನೀಡುತ್ತಲೇ ಕಾಲ ಕಳೆದು ರೈತರ ದಿಕ್ಕು ತಪ್ಪಿಸುವ ಕಾರ್ಯ ಮಾಡಬೇಡಿ, ಡಬಲ್ ಇಂಜಿನ್ ಸರ್ಕಾರ ಡಬಲ್ ಗೇಮ್ ಆಡಬಾರದು, ಪ್ರಕೃತಿ ಮುನಿಸು ಈ ವರ್ಷ ಅತಿವೃಷ್ಟಿ ಮಳೆ ಹಾನಿಯಿಂದ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ. ಗ್ರಾಹಕರು ಆಹಾರಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಆಗಲಾದರೂ ರೈತರ ಶಕ್ತಿ ತಿಳಿಯುತ್ತದೆ ಎಂದು ಹೇಳಿದರು.
ತಮಿಳುನಾಡಿನ ಮಾಣಿಕ್ಯಂ, ಉತ್ತರಕನ್ನಡ ಜಿಲ್ಲೆಯ ಅಧ್ಯಕ್ಷ ಕುಮಾರ ಬೂಬಾಟಿ, ರಾಜ್ಯ ರೈತಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಪಿ ಸೂಮಶೇಖರ್, ಅತ್ತಹಳ್ಳಿ ದೇವರಾಜ್, ಕಿರಗಸೂರ ಶಂಕರ, ಗುರುಸಿದ್ದಪ್ಪ ಕೂಟಗಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರಾತ್ರಿ 11ರ ನಂತರ ರಸ್ತೆಯಲ್ಲಿ ನಡೆದಾಡಿದ್ದಕ್ಕೆ ದಂಡ.. ಬೆಂಗಳೂರು ಪೊಲೀಸರ ವಿರುದ್ಧ ದಂಪತಿ ಆರೋಪ