ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮುನಿರತ್ನಗೆ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದ್ದು ಹೈಕಮಾಂಡ್ ಮೇಲೆ ಒತ್ತಡ ಹೇರಿ ಟಿಕೆಟ್ ಕೊಡಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಅವರು ದುಂಬಾಲು ಬಿದ್ದಿದ್ದಾರೆ.
ಆರ್ ಆರ್ ನಗರ ಕ್ಷೇತ್ರಕ್ಕೆ ಇನ್ನೂ ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿ ಮುನಿರತ್ನ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದರು. ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಬಿಎಸ್ವೈ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದು ಈ ಹಿಂದಿನ ಉಪ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಾದಂತೆ ಈ ಬಾರಿಯೂ ಆಗಬೇಕಿತ್ತು. ಆದರೆ ನನ್ನ ವಿಚಾರದಲ್ಲಿ ಯಾಕೆ ಹೀಗಾಯಿತು ಎಂದು ಸಿಎಂ ಮುಂದೆ ಮುನಿರತ್ನ ಅಳಲು ತೋಡಿಕೊಂಡಿದ್ದಾರೆ.
ಎರಡು ಹೆಸರು ಶಿಫಾರಸ್ಸು ಮಾಡಿದ್ದೇ ಸರಿಯಲ್ಲ, ಕೊಟ್ಟ ಮಾತಿನಂತೆ ನನಗೆ ಟಿಕೆಟ್ ಸಿಗಬೇಕಿತ್ತು. ಆದರೆ ಈಗ ರಾಜ್ಯ ಘಟಕ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದೆ. ವರಿಷ್ಠರು ಇನ್ನೂ ಟಿಕೆಟ್ ಅಂತಿಮಗೊಳಿಸಿಲ್ಲ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ನನ್ನ ರಾಜಕೀಯ ಭವಿಷ್ಯವೇನು? ಯಾವ ಕಾರಣಕ್ಕೂ ಟಿಕೆಟ್ ಕೈತಪ್ಪಬಾರದು, ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟು ನನಗೆ ಟಿಕೆಟ್ ಸಿಗುವಂತೆ ಮಾಡಿ ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಇದಕ್ಕೆ ಸ್ಪಷ್ಟ ಭರವಸೆ ಕೊಡದ ಸಿಎಂ, ಹೈಕಮಾಂಡ್ಗೆ ಎಲ್ಲವನ್ನೂ ವಿವರಿಸಲಾಗಿದೆ. ಎಲ್ಲವನ್ನು ಪರಿಶೀಲನೆ ಮಾಡಿಯೇ ಟಿಕೆಟ್ ಅಂತಿಮಗೊಳಿಸಲಿದ್ದಾರೆ, ಆತಂಕಗೊಳ್ಳಬೇಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಸಿಎಂ ಭರವಸೆಗೆ ತೃಪ್ತರಾಗದ ಮುನಿರತ್ನ, ವಲಸಿಗರ ತಂಡದ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಹಾಗೂ ಆಪ್ತರಾದ ಬೈರತಿ ಬಸವರಾಜ್, ಎಸ್.ಟಿ ಸೋಮಶೇಖರ್, ಡಾ. ಸುಧಾಕರ್ ಮೂಲಕ ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹೇರಿ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಇಷ್ಟೆಲ್ಲದರ ನಡುವೆ ಯಡಿಯೂರಪ್ಪ ಮನವಿಗೆ ಹೈಕಮಾಂಡ್ ಸ್ಪಂದಿಸಲಿದೆಯಾ? ಟಿಕೆಟ್ ಮುನಿರತ್ನಗೆ ನೀಡುತ್ತದೆಯೋ ಅಥವಾ ಸಂಘಟನೆ ಮುಖ್ಯ ಎಂದು ತುಳಸಿ ಮುನಿರಾಜುಗೌಡಗೆ ನೀಡಲಿದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.