ಬೆಂಗಳೂರು : ವ್ಯಕ್ತಿಯೊಬ್ಬರಿಗೆ ಮಾನಹಾನಿಯಾಗುವಂತಹ ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳ ಪ್ರದರ್ಶನ ಮಾಡಿದ ಆರೋಪದಲ್ಲಿ ನಗರದ ಬೋರಿಂಗ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಅಧ್ಯಕ್ಷರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣ ರದ್ದು ಕೋರಿ ಅನೂಫ್ ಬಜಾಜ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ಧ ನ್ಯಾಯಪೀಠ ಈ ಆದೇಶ ನೀಡಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿದ ನ್ಯಾಯಪೀಠ, ಅರ್ಜಿದಾರರಾದ ಬಜಾಜ್ ಅವರು ದೂರುದಾರರಿಗೆ ಮಾನಿಯಾಗುವಂತೆ ನಡೆದುಕೊಂಡಿದ್ದಾರೆ. ಈ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರ ನಡುವೆ ವ್ಯಂಗ್ಯ ಚಿತ್ರಗಳನ್ನು ನೀಡಿ ನಿರ್ದಿಷ್ಟ ಜಾತಿಯನ್ನು ಪ್ರಸ್ತಾಪಿಸಿ ನಿಂದನೆ ಮಾಡಿದ್ದಾರೆ. ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಜಯಣ್ಣ(ದೂರುದಾರ) ವಿರುದ್ಧ ಭಿತ್ತಿ ಪತ್ರವನ್ನು ಹಿಡಿದು ನಿಂದನೀಯ ಘೋಷಣೆಗಳನ್ನು ಕೂಗಲಾಗಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಭಿತ್ತಿ ಪತ್ರ ಪ್ರದರ್ಶನ ಮಾಡಿದ್ದಾರೆ. ಇದೊಂದು ದ್ವೇಷದ ಪ್ರಕರಣವಾಗಿದೆ.
ದೂರುದಾರರು ದರೋಡೆ ಅಥವಾ ಡಕಾಯಿತಿಯಂತಹ ಘೋರ ಅಪರಾಧಗಳನ್ನು ಮಾಡಿರುವಂತೆ ಬಿಂಬಿಸಲಾಗಿದೆ. ಅಲ್ಲದೆ, ಸಂಸ್ಥೆಯ ಎಲ್ಲ ಸದಸ್ಯರು ವಿದ್ಯಾವಂತರು, ವ್ಯಾಪಾರಸ್ಥರು ಮತ್ತು ವೃತ್ತಿಪರರು ಆಗಿದ್ದು, ಈ ರೀತಿಯ ವರ್ತನೆ ತೋರಿದ್ದಾರೆ. ಹೀಗಾಗಿ ವಿಚಾರಣಾ ನ್ಯಾಯಾಲಯ ಸಂಜ್ಞೆ ತೆಗೆದುಕೊಂಡಿರುವುದರಲ್ಲಿ ಯಾವುದೇ ಕಾನೂನಿನ ದೋಷ ಕಂಡು ಬಂದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಸಭೆಯಲ್ಲಿ ಅಂದು ನೀಡಿದ ಪತ್ರ ಐಪಿಸಿ ಸೆಕ್ಷನ್ 499ರ ಅಡಿ ಅನ್ವಯಿಸುವುದಿಲ್ಲ. ಪ್ರತಿವಾದಿ ದೂರದಾರರ ವಿರುದ್ಧ ಮಾನಹಾನಿ ಮಾಡುವ ಉದ್ದೇಶವೂ ಇಲ್ಲ. ಅಲ್ಲದೆ ಈ ಪತ್ರ ಸಂಸ್ಥೆಯ ಸದಸ್ಯರಿಗೆ ಮಾತ್ರ ರವಾನಿಸಿದ್ದು, ಯಾವುದೇ ರೀತಿಯಲ್ಲಿ ಸಾರ್ವಜನಿಕವಾಗಿ ಪ್ರಚಾರ ಮಾಡಿಲ್ಲ. ಹೀಗಾಗಿ ಪ್ರಕರಣವನ್ನು ರದ್ದು ಮಾಡಬೇಕು ಎಂದು ವಾದ ಮಂಡಿಸಿದ್ದರು.
ದೂರುದಾರ(ಪ್ರತಿವಾದಿ)ಪರ ವಕೀಲರು ವಾದ ಮಂಡಿಸಿ, ಹಣಕಾಸಿನ ಅವ್ಯವಹಾರದ ಆರೋಪದಲ್ಲಿ ದೂರುದಾರರನ್ನು ಸಂಸ್ಥೆಯ ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿದೆ. ಜತೆಗೆ, ಈ ಸಂಬಂಧ ದೂರು ದಾಖಲಾಗಿದ್ದು, ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಜಾಗೊಂಡಿದೆ. ಇದೀಗ ಸುಪ್ರೀಕೋರ್ಟ್‌ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಆದರೆ, ವಿನಾಕಾರಣ ಅರ್ಜಿದಾರರು ದೂರುದಾರರಿಗೆ ಅವಮಾನಿಸುವಂತೆ ನಡೆದುಕೊಂಡಿದ್ದಾರೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರರು 2014ರ ಮೇ 9ರಂದು ಕರೆದಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಪ್ರತಿವಾದಿ(ದೂರುದಾರ) ಜಯಣ್ಣ ವಿರುದ್ಧ ಕೆಲವು ವ್ಯಂಗ್ಯ ಚಿತ್ರಗಳು ಮತ್ತು ಮಾನಹಾನಿಕರ ಚಿತ್ರಗಳನ್ನು ಪ್ರದರ್ಶನ ಮಾಡಿ ಉದ್ದೇಶಪೂರ್ವಕವಾಗಿ ಅವಮಾನಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ನೊಂದ ಅರ್ಜಿದಾರ ಜಯಣ್ಣ ಎಂಬವರು 2018ರಲ್ಲಿ ಬಜಾಜ್ ವಿರುದ್ಧ ಐಪಿಸಿ ವಿವಿಧ ಕಾನೂನುಗಳ ಅಡಿಯಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರನ್ನು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿದಾರರ ವಿರುದ್ಧ ಸಂಜ್ಞೆ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಬಜಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ರಾಜಕೀಯದಲ್ಲಿ ಧರ್ಮ ಬಳಕೆ ನಿಲ್ಲಿಸಿದ ಕ್ಷಣ, ದ್ವೇಷ ಭಾಷಣಕ್ಕೆ ಕೊನೆ: ಸುಪ್ರೀಂಕೋರ್ಟ್