ಬೆಂಗಳೂರು: ದೀಪಾವಳಿ ವೇಳೆ ಯಾವುದೇ ರೀತಿಯ ಉಗ್ರರ ದುಷ್ಕೃತ್ಯ ಸೇರಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು. ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ.ಎನ್. ರಾಜು ಮತ್ತು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರರಾವ್ ಜೊತೆ ರಾಜ್ಯದ ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣಕ್ಕೆ ಕಡಿವಾಣ, ರೌಡಿಸಂ ಹಾವಳಿಗೆ ಬ್ರೇಕ್ ಹಾಕುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ವಿಶೇಷವಾಗಿ ಬಾಂಗ್ಲಾ ವಲಸಿಗರ ಅಕ್ರಮ ವಾಸ್ತವ್ಯ, ಭಯೋತ್ಪಾದನಾ ಚಟುವಟಿಕೆ ಕುರಿತು ಗಂಭೀರ ಚರ್ಚೆ ನಡೆಯಿತು.
ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳ ಗಡಿಪಾರು, ಉಗ್ರ ಚಟುವಟಿಕೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗು ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದ್ದು ದೀಪಾವಳಿ ಹಬ್ಬದ ವೇಳೆ ಅಹಿತರ ಘಟನೆ ನಡೆಯದಂತೆ ಬೆಂಗಳೂರು ಹಾಗು ರಾಜ್ಯದ ಇತರ ಭಾಗದಲ್ಲಿ ನೋಡಿಕೊಳ್ಳುವಂತೆ ನೀಲಮಣಿ ರಾಜು ಹಾಗು ಭಾಸ್ಕರ್ ರಾವ್ಗೆ ಸಿಎಂ ಸೂಚನೆ ನೀಡಿದರು.
ಉಗ್ರರು ಬೆಂಗಳೂರಿಗೆ ಬಂದಿರುವ ಸಾಧ್ಯತೆ ಇದೆ ಎನ್ನುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಟ್ಟೆಚ್ಚರದಿಂದ ಇರುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ.