ಬೆಂಗಳೂರು: ದ. ಕನ್ನಡ ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಮತ್ತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕಯುಕ್ತ ಬೆಡ್ಗಳ ಸಂಖ್ಯೆಯನ್ನು ಕೂಡಲೇ ಹೆಚ್ಚಿಸಬೇಕು ಎಂದು ಉಪ ಮುಖ್ಯಮಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ದ. ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಇತರ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಡಿಸಿಎಂ ಅಶ್ವತ್ಥನಾರಾಯಣ, ಜಿಲ್ಲಾಸ್ಪತ್ರೆಯ ವೆನ್‌ಲಾಕ್ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್ ಬೆಡ್ಗಳನ್ನು ಕೂಡಲೇ ಹೆಚ್ಚಿಸಬೇಕು. ದಿನೇ ದಿನೇ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡುವುದು ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.
ವೆನ್‌ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ 150 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಇರುವ ಅಂಶವನ್ನು ಜಿಲ್ಲಾಧಿಕಾರಿಗಳು ಡಿಸಿಎಂ ಗಮನಕ್ಕೆ ತಂದರು. ಸದ್ಯ ಇಷ್ಟು ಪ್ರಮಾಣದ ಆಕ್ಸಿಜನೇಟೆಡ್ ಬೆಡ್ಗಳು ಸಾಕಾಗುವುದಿಲ್ಲ. ಈ ಪ್ರಮಾಣವನ್ನು 450ಕ್ಕೆ ಹೆಚ್ಚಿಸಬೇಕು. ಕೂಡಲೇ ಈ ಕುರಿತ ಪ್ರಸ್ತಾವನೆಯನ್ನು ಆರೋಗ್ಯ ಆಯುಕ್ತರಿಗೆ ಕಳುಹಿಸಿ. ನಾನೂ ಅವರ ಜೊತೆ ಮಾತನಾಡಿ ಆದಷ್ಟು ಬೇಗ ಮಂಜೂರಾತಿ ಕೊಡಿಸುತ್ತೇನೆ. ಇದರ ಜೊತೆಗೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಇಂಥ ಬೆಡ್ ವ್ಯವಸ್ಥೆ ಆಗಲೇಬೇಕು ಎಂದು ಡಿಸಿ ಅವರಿಗೆ ಸೂಚಿಸಿದರು.
ಬೆಡ್ ಪಡೆಯಲು ಸೂಚನೆ:
ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳಿವೆ. ಸಾಕಷ್ಟು ಖಾಸಗಿ ಆಸ್ಪತ್ರೆಗಳೂ ಇವೆ. ಹೀಗೆ ಕಾಲೇಜು, ಸರ್ಕಾರಿ-ಖಾಸಗಿ ಆಸ್ಪತ್ರೆ ಸೇರಿ ಎಲ್ಲೆಡೆ ಕನಿಷ್ಠ 8 ಸಾವಿರಕ್ಕೂ ಹೆಚ್ಚು ಬೆಡ್ಗಳಿವೆ. ಕೂಡಲೇ ಇವರಿಂದ ಅವುಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ತಕ್ಷಣವೇ ಆಯಾ ಮ್ಯಾನೇಜ್ಮೆಂಟ್ಗಳ ಜೊತೆ ಮಾತನಾಡಿ ಒಪ್ಪಂದ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಡಿಸಿಎಂ ಸೂಚಿಸಿದರು.
ಸರ್ಕಾರಿ, ಖಾಸಗಿ ಯಾವುದೇ ಆಸ್ಪತ್ರೆ ಇರಲಿ, ಸರ್ಕಾರದಿಂದ ಶಿಫಾರಸ್ಸಾದ ರೋಗಿಗಳಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಖಾಸಗಿ ಆಸ್ಪತ್ರೆಗಳಿಗೆ ಆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಯಾರೂ ಕೂಡ ರೋಗಿಗಳಿಂದ ಹಣ ಪಡೆಯುವಂತಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ರೋಗಿಗಳನ್ನು ನೇರವಾಗಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೆ ಕಳುಹಿಸಬೇಕು. ವಿನಾಕಾರಣ ರೋಗಿಯನ್ನು ಸುತ್ತಿಸಬಾರದು. ಆಸ್ಪತ್ರೆಗೆ ಬರುವ ರೋಗಿಗೆ ಕೂಡಲೇ ಬೆಡ್ ಹಂಚಿಕೆಯಾಗಬೇಕು ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ಗಳಲ್ಲಿ 250 ಹಾಸಿಗೆಗಳು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ 3,800 ಹಾಸಿಗೆಗಳು ಲಭ್ಯವಾಗಲಿವೆ ಎಂಬ ಅಂಶವನ್ನು ಜಿಲ್ಲಾಧಿಕಾರಿ ಡಿಸಿಎಂ ಗಮನಕ್ಕೆ ತಂದರು.
ಡ್ಯಾಷ್ ಬೋರ್ಡ್ ವ್ಯವಸ್ಥೆಗೆ ಸೂಚನೆ:
ಕೋವಿಡ್ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕಾದರೆ ಡ್ಯಾಷ್ ಬೋರ್ಡ್ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿಕೊಳ್ಳಬೇಕು. ಎಲ್ಲಿ ಬೆಡ್ಗಳಿವೆ? ರೋಗಿಗಳು ಎಷ್ಟಿದ್ದಾರೆ? ಮೂಲಸೌಕರ್ಯಗಳ ವ್ಯವಸ್ಥೆ ಇತ್ಯಾದಿ ಸೇರಿದಂತೆ ಎಲ್ಲವೂ ಈ ಡ್ಯಾಷ್ ಬೋರ್ಡ್ನಲ್ಲೇ ಸಿಗಬೇಕು. ಯಾವುದೇ ವ್ಯಕ್ತಿಗೆ ಸೋಂಕು ಪಾಸಿಟಿವ್ ಬಂದರೆ ಆ ವಿಷಯವನ್ನು ಜನರಿಗೆ ತಿಳಿಸಿ. ಆಗ ಜನರಲ್ಲಿ ಆತಂಕ, ಗೊಂದಲ ತಪ್ಪುತ್ತದೆ. ಜತೆಯಲ್ಲೇ ನಾನ್ ಕೋವಿಡ್ ರೋಗಿಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ಸಿಗುವಂತೆ ಆಗಬೇಕು. ಸೆಂಟ್ರಲೈಸ್ಡ್ ರಿಪೋರ್ಟಿಂಗ್ ಸಿಸ್ಟಂನನ್ನು ಅಳವಡಿಸಿಕೊಳ್ಳಬೇಕು ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದರು.
ಜಿಲ್ಲೆಯಲ್ಲಿ ಸದ್ಯಕ್ಕೆ 59 ಆ್ಯಂಬುಲೆನ್ಸ್ಗಳಿದ್ದು, ಮತ್ತಷ್ಟು ಖರೀದಿಸಿ ಹೆಚ್ಚುವರಿಯಾಗಿ ಚಾಲಕರನ್ನು ನೇಮಿಸಿಸಕೊಳ್ಳಿ. ಊಟ, ಔಷಧಿ, ಪಿಪಿಎ ಕಿಟ್ಗಳು ಕೊರತೆಯಾಗದಂತೆ ನೋಡಿಕೊಳ್ಳಿ. ಹೋಮ್ ಕೇರ್ ಬಗ್ಗೆ ಮತ್ತಷ್ಟು ಅರಿವು ಮೂಡಿಸಿ ಎಂದು ಅವರು ಸೂಚಿಸಿದರು. ಈಗಾಗಲೇ ಜಿಲ್ಲೆಯಾದ್ಯಂತ 430 ಜನರು ಹೋಮ್ ಕೇರ್ಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕರು ತಮ್ಮ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುವ ಒಲವು ತೋರುತ್ತಿದ್ದಾರೆಂದು ಡಿಸಿ ಸಿಂಧೂ ಅವರು ಮಾಹಿತಿ ನೀಡಿದರು.
ಇದರ ಜತೆಯಲ್ಲೇ ಸೋಂಕಿತರ ಪರೀಕ್ಷೆಯ ಪ್ರಮಾಣವನ್ನು ಹೆಚ್ಚು ಮಾಡುವಂತೆ ಡಿಸಿಎಂ ಸೂಚಿಸಿದರು. ಸದ್ಯಕ್ಕೆ ದಿನವೊಂದಕ್ಕೆ 750 ಟೆಸ್ಟ್ ಆಗುತ್ತಿದೆ. ಈವರೆಗೂ 38 ಸಾವಿರ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ವಿಡಿಯೋ ಮಾತುಕತೆಯಲ್ಲಿ ಡಿಸಿಎಂ ಜತೆ ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಖಾತೆ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪುಂಜಾ ಪಾಲ್ಗೊಂಡಿದ್ದರು. ಮಂಗಳೂರಿನಿಂದ ಜಿಲ್ಲಾಧಿಕಾರಿಯವರ ಜೊತೆ ಶಾಸಕ, ಯು.ಟಿ. ಖಾದರ್, ಮತ್ತೋರ್ವ ಶಾಸಕ ವೇದವ್ಯಾಸ ಕಾಮತ್ ಭಾಗಿಯಾಗಿದ್ದರು. ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.