ಬೆಂಗಳೂರು: ಲೋಕೋಪಯೋಗಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 7699 ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದ್ದು, ಅಗತ್ಯವಾದ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಸೂಚಿಸಿದ್ದಾರೆ.
ವಿಕಾಸ ಸೌಧದಲ್ಲಿ ಇಂದು ಸಂಜೆ ನಡೆದ ವಲಯ ಮತ್ತು ಘಟಕವಾರು ಪ್ರಗತಿ ಪರಿಶೀಲನೆಯ ಅಧ್ಯಕ್ಷತೆ ವಹಿಸಿ ಇಲಾಖೆಯ ಮ್ಯಾನೇಜ್ಮೆಂಟ್ ಇನ್ ಫರ್ಮೆಂಟೇಶನ್ ಸಿಸ್ಟಮ್ 2019 ಪುಸಕ್ತ ಬಿಡುಗಡೆ ಮಾಡಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ರಸ್ತೆಗಳ ಅಭಿವೃದ್ಧಿಗಾಗಿ ಮತ್ತು ನಿರ್ವಹಣೆಗಾಗಿ 'ವಾರ್ಷಿಕ ಯೋಜನೆ' ತಯಾರಿಸಿದ್ದು, ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸುವಾಗ ಈ ರಸ್ತೆಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದು ಹೇಳಿದರು.
ರಸ್ತೆ ಮತ್ತು ಕಟ್ಟಡಗಳ ನಿರ್ವಹಣೆಗಾಗಿ ಈಗಾಗಲೇ 652.00 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಈ ಮೊತ್ತದಲ್ಲಿ ಮುಂಗಾರು ಪೂರ್ವ ರಸ್ತೆ ನಿರ್ವಹಣೆಯನ್ನು ಹಾಗೂ ಕಟ್ಟಡಗಳ ವಾರ್ಷಿಕ ನಿರ್ವಹಣೆಯನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಆರ್‌ಐಡಿಎಫ್-25ರ ಯೋಜನೆಯಡಿ 718 ಕೋಟಿ ರೂ. ಮೊತ್ತದಲ್ಲಿ 3243 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಕಾಮಗಾರಿಗಳಿಗೆ ಶೀಘ್ರವಾಗಿ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿಗಳನ್ನು ಪ್ರಾರಂಭಿಸಿ ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ ಇಲಾಖೆಯ ಅನುದಾನದಲ್ಲಿ ಈ ಸಾಲಿನಲ್ಲಿ 22 ರಾಣೆ ಚೆನ್ನಮ್ಮ/ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಕೀರ್ಣ ಕಾಮಗಾರಿಗಳನ್ನು ಹಾಗೂ 80 ಎಸ್‌ಸಿ ಎಸ್‌ಟಿ ಮಕ್ಕಳ ವಸತಿ ನಿಲಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ನಿವೇಶನಗಳನ್ನು ಒದಗಿಸಿದ್ದು, ಈ ನಿವೇಶನಕ್ಕೆ ಅನುಗುಣವಾಗಿ ಕಟ್ಟಡಗಳ ವಿನ್ಯಾಸವನ್ನು ಕೈಗೊಂಡು ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಎಲ್ಲಾ ವಸತಿ ನಿಲಯಗಳ ಆವರಣಗಳಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ತಿಳಿಸಿದರು.
ಅಪೆಂಡಿಕ್ಸ್-ಇ ಕ್ರಿಯಾ ಯೋಜನೆಯಡಿ ಅನುಮೋದನೆಯಾಗಿರುವ ಕಾಮಗಾರಿಗಳಲ್ಲಿ ಅತ್ಯವಶ್ಯಕ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು. ಬೆಂಗಳೂರು ಸುತ್ತಮುತ್ತಲಿನ ರಸ್ತೆಗಳ ಪ್ರಗತಿಯನ್ನು ತೀವ್ರಗೊಳಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೆಆರ್‌ಡಿಸಿಎಲ್ ಸಂಸ್ಥೆಗೆ ಸೂಚಿಸಿದರು. ಕೆಶಿಪ್-3ರ ಎಡಿಬಿ-2ರಡಿ 450 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯು ಶೇ.80ರಷ್ಟು ಪೂರ್ಣಗೊಂಡಿದ್ದು, ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಶಾಲಾ ಕೊಠಡಿಗಳು ಅತ್ಯಾವಶ್ಯಕ ವಾಗಿರುವುದರಿಂದ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಡಿಸಿಎಂ ಸೂಚನೆ ನೀಡಿದರು.
ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಭಾಗವು ಮಳೆಗಾಲದಲ್ಲಿ ಹೆಚ್ಚು ಹಾಳಾಗುತ್ತಿದ್ದು, ಇದರ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಂಡು ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕೇಂದ್ರ ಭೂಸಾರಿಗೆ ಮಂತ್ರಾಲಯವು 'ತಾತ್ವಿಕವಾಗಿ ಉನ್ನತೀಕರಿಸಿರುವ' ರಾಷ್ಟ್ರೀಯ ಹೆದ್ದಾರಿಗಳನ್ನು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟಿಸುವ ವರೆಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಬೇಕು .ರಸ್ತೆ ಸುರಕ್ಷತೆ ಕಾಮಗಾರಿಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ, ಅಪಘಾತವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಹೇಳಿದರು.
ಇಲಾಖೆಯ ಉಪವಿಭಾಗ ಮತ್ತು ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಇಂಜಿನಿಯರ್‌ಗಳಿಗೆ 'ಕರ್ನಾಟಕ ಹೆದ್ದಾರಿ ಕಾಯ್ದೆ-1964'ರ ಬಗ್ಗೆ ಹೆಚ್ಚಿನ ತರಬೇತಿ ನೀಡಲು ವಲಯವಾರು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಬಿ. ಗುರುಪ್ರಸಾದ್ , ಕೆಆರ್ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕುಮಾರ್, ಕೆಶಿಪ್ ಸಿಇಓ ಕೃಷ್ಣರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.