ಬೆಂಗಳೂರು: "ಅಗ್ನಿ ಅನಾಹುತದಿಂದ ಗಾಯಗೊಂಡಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಶಿವಕುಮಾರ್ ಆರೋಗ್ಯ ಸ್ಥಿತಿಗತಿ ಚಿಂತಾಜನಕವಾಗಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಅಗ್ನಿ ಅನಾಹುತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಿಬಿಎಂಪಿ ಚೀಫ್ ಇಂಜಿನಿಯರ್ ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿರುವ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ಡಿ.ಕೆ.ಶಿವಕುಮಾರ್ ಇಂದು (ಸೋಮವಾರ) ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡು, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಾನು ಈ ಹಿಂದೆ ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ಆರೋಗ್ಯ ವಿಚಾರಿಸಲು ಭೇಟಿ ನೀಡಿದಾಗ ಅವರ ಆರೋಗ್ಯ ಸುಧಾರಿಸುತ್ತಿರುವಂತೆ ಕಂಡಿತ್ತು. ಉತ್ತಮ ಚಿಕಿತ್ಸೆ ಕೊಡಿಸಬೇಕು ಎಂಬ ಕಾರಣಕ್ಕೆ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಕೂಡ 2-3 ಬಾರಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ. ಇಲ್ಲಿನ ವೈದ್ಯರು ಎಲ್ಲಾ ರೀತಿಯ ಚಿಕಿತ್ಸೆ ನೀಡಿ ಅವರ ಆರೋಗ್ಯ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೋರ್ವ ಸಿಬ್ಬಂದಿ ಜ್ಯೋತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ" ಎಂದು ಮಾಹಿತಿ ನೀಡಿದರು.
ಅಗ್ನಿ ಅವಘಡದ ತನಿಖೆ ಬಗ್ಗೆ ಪ್ರತಿಕ್ರಿಯಿಸಿ, "ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತನಿಖಾ ವರದಿಗಳು ಬರಲಿ. ಪೊಲೀಸ್, ಬಿಬಿಎಂಪಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಅದು ಪೂರ್ಣಗೊಳ್ಳಲಿ. ಆಮೇಲೆ ಮಾತನಾಡುತ್ತೇನೆ" ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಡಿಸಿಎಂ, "ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಇಲಾಖೆಗಳಿಂದ ಸಮಗ್ರ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ಒಂದು ಬಿಬಿಎಂಪಿ ವತಿಯಿಂದ ತನಿಖೆ, ಎರಡನೇಯದ್ದು ಪೊಲೀಸರಿಂದ, ಮೂರನೇಯದ್ದು ವಿದ್ಯುತ್ ಪರಿವೀಕ್ಷಣಾ ಇಲಾಖೆಯಿಂದ ತನಿಖೆಗೆ ನಡೆಸಲು ಸೂಚನೆ ನೀಡಲಾಗಿದೆ. ಈ ಮೂರು ಇಲಾಖೆಗಳಿಂದಲೂ ತನಿಖೆ ನಡೆಯಲಿದೆ" ಎಂದು ಹೇಳಿದ್ದರು.
ಬಿಬಿಎಂಪಿ ಆಯುಕ್ತರ ಪ್ರತಿಕ್ರಿಯೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಶಿವಕುಮಾರ್ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ. ವೈದ್ಯರ ತಂಡ ನಿರಂತರವಾಗಿ ಚಿಕಿತ್ಸೆ ನೀಡುತ್ತಿದೆ. ಗುಣಮುಖರಾಗಲೆಂದು ನಾವೆಲ್ಲ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ. ಆದರೆ ಕೆಲವು ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಬರುತ್ತಿದೆ. ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತಾರೆ ಎಂದಿದ್ದಾರೆ.
ಅಪೋಲೋ ಆಸ್ಪತ್ರೆಗೆ ಬಿಬಿಎಂಪಿ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಟನೆಯ ಅಧ್ಯಕ್ಷ ಅಮೃತ್ ರಾಜ್ ಕೂಡ ಭೇಟಿ ನೀಡಿದರು. ಹಾಗೆಯೇ ಶೇಷಾದ್ರಿ ಪುರಂ ಪೊಲೀಸರು, ಶಿವಕುಮಾರ್ ಸಂಬಂಧಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಆಗಮಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಅಗ್ನಿ ಅವಘಡದ ಆಂತರಿಕ ತಾಂತ್ರಿಕ ವಿಚಾರಣೆ ನಡೆಸಲು ಪಾಲಿಕೆ ಇಂಜಿನಿಯರ್ ಇನ್ ಚೀಫ್ ಬಿ.ಎಸ್.ಪ್ರಹ್ಲಾದ್ ಅವರನ್ನು ನೇಮಿಸಲಾಗಿದೆ. ತಾಂತ್ರಿಕ ವಿಚಾರಣಾ ವರದಿಯನ್ನು ಆಗಸ್ಟ್ 31ರೊಳಗೆ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದರು.
ಬಿಬಿಎಂಪಿ ಗುಣನಿಯಂತ್ರಣ ಕೊಠಡಿಯಲ್ಲಿ ಅಗ್ನಿ ದುರಂತದ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಶಿವಕುಮಾರ್ ಕೋಮಾಗೆ ಹೋಗಿದ್ದಾರೆ. ಈ ಅಗ್ನಿ ದುರಂತದ ಸಮಯದಲ್ಲಿ ಒಟ್ಟು 9 ಮಂದಿಗೆ ಸುಟ್ಟ ಗಾಯಗಳಾಗಿದ್ದವು. ಇವರಲ್ಲಿ ಗುಣನಿಯಂತ್ರಣ ಕೊಠಡಿಯ ಮುಖ್ಯ ಇಂಜಿನಿಯರ್ ಶಿವಕುಮಾರ್ ಹಾಗೂ ಗಣಕಯಂತ್ರ ಆಪರೇಟರ್ ಜ್ಯೋತಿ ಅವರನ್ನು ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಇವರಲ್ಲಿ ಜ್ಯೋತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಇದನ್ನೂ ಓದಿ : ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ: ತಾಂತ್ರಿಕ ವಿಚಾರಣೆಗೆ ಆದೇಶ