ಬೆಂಗಳೂರು : ಬಿಜೆಪಿಯವರು ಸಮಾಜವನ್ನು ಕತ್ತರಿಯಿಂದ ಕತ್ತರಿಸುವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ಸೂಜಿಯಿಂದ ಹೊಲಿಯುವ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಭಯದ ವಾತಾವರಣ ಉಂಟು ಮಾಡಲಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ಸದಾಶಿವನಗರದ ನಿವಾಸದ ಬಳಿ ಇಂದು ಅವರು ಪ್ರತಿಕ್ರಿಯಿಸಿದರು. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಹಾಡನ್ನು ನಾಡಗೀತೆಯಾಗಿ ಘೋಷಣೆ ಮಾಡಿದೆವು. ಈ ಹಾಡೇ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೆ ನೀಡಿರುವ ಸಂದೇಶ ಎಂದರು.
ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುವುದೇ ನಮ್ಮ ಗುರಿ ಹಾಗೂ ಉದ್ದೇಶ. ಬಿಜೆಪಿಯವರು ಸತ್ಯಶೋಧನಾ ಸಮಿತಿಯ ಮೂಲಕ ಅವರಿಗೆ ಏನು ಬೇಕೋ ಅದನ್ನು ಹೇಳುತ್ತಿದ್ದಾರೆ. ನಾವು ಸಮಾಜ ಜೋಡಿಸುತ್ತಿದ್ದರೆ, ಅವರು ಒಡೆಯುತ್ತಿದ್ದಾರೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸ ಎಂದು ಟೀಕಿಸಿದರು.
ಇದನ್ನೂ ಓದಿ : ಶಿವಮೊಗ್ಗ: ರಾಗಿಗುಡ್ಡಕ್ಕೆ ಭೇಟಿ ನೀಡಿದ ಕಟೀಲ್ ನೇತೃತ್ವದ ಸತ್ಯ ಶೋಧನಾ ಸಮಿತಿ
ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಿಂದೂ ಮತ್ತು ಮುಸ್ಲಿಂ ಇಬ್ಬರನ್ನೂ ಭೇಟಿ ಮಾಡಿ ಮಾತನಾಡಿದ್ದಾರೆ. ಅವರ ಸಮಸ್ಯೆ ಆಲಿಸಿದ್ದಾರೆ. ತಪ್ಪು ಕೆಲಸವನ್ನು ಖಂಡಿಸಿದ್ದಾರೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯ ಇಲ್ಲ. ಯಾರು ಕಾನೂನು ಮೀರಿ ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ನೀಡುವ ಕೆಲಸ ಮಾಡುತ್ತೇವೆ. ಆದರೆ ಬಿಜೆಪಿಯವರು ಪಟ್ಟಿ ಇಟ್ಟುಕೊಂಡು ಕೆಲವರ ಮನೆಗೆ ಹೋಗಿದ್ದಾರೆ ಎಂದು ಡಿಕೆಶಿ, ನಾವು ನಿಜವಾದ ಹಿಂದುಗಳು, ಬಿಜೆಪಿಯವರು ನಕಲಿ ಹಿಂದುಗಳು ಎನ್ನುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮಾತಿಗೆ ಇದೇ ವೇಳೆ ಸಹಮತ ವ್ಯಕ್ತಪಡಿಸಿದರು.
ಎನ್. ಚಲುವರಾಯಸ್ವಾಮಿ ಹೇಳಿಕೆ: ಮತ್ತೊಂದೆಡೆ, ಮಂಡ್ಯದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಶಿವಮೊಗ್ಗ ಗಲಾಟೆಗೆ ಕಾಂಗ್ರೆಸ್ ಸಚಿವರು ಕಾರಣ ಎಂಬ ಬಿಜೆಪಿ ನಾಯಕರ ಹೇಳಿಕೆ ಪ್ರತಿಕ್ರಿಯಿಸಿ, ಗಲಾಟೆಗಳು ಹುಟ್ಟುವುದು ಆರ್ಎಸ್ಎಸ್ ಹಿನ್ನೆಲೆಯಲ್ಲಿ. ಇದಕ್ಕೆಲ್ಲಾ ಪಿತಾಮಹ ಬಿಜೆಪಿ. ಆರ್ಎಸ್ಎಸ್, ಭಜರಂಗದಳದಲ್ಲಿ ಒಳ್ಳೆಯವರಿದ್ದಾರೆ. ರಾಜಕಾರಣದ ಲಾಭ ಪಡೆಯಲು ಬಿಜೆಪಿ ಎರಡು ಸಂಸ್ಥೆಗಳನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ಇದು ನಮ್ಮ ಮನೆ, ನೆಂಟರು ಬಂದರೆಂದು ಬೇರೆ ಫಾರ್ಮ್‌ಹೌಸ್, ಗೆಸ್ಟ್ ಹೌಸ್ ಹೋಗಿ ಮಲಗಲ್ಲ: ಪ್ರೀತಂಗೌಡ