ಬೆಂಗಳೂರು: ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರೆ, ಮುಂಬೈಯಿಂದ ಮರಳಿ ಬರುವುದಾಗಿ ಗೋಪಾಲಯ್ಯ ಮತ್ತು ಎಸ್ ಟಿ ಸೋಮಶೇಖರ್ ಫೋನ್ ಮಾಡಿ ಹೇಳಿದ್ದರು. ಆದರೆ, ಕುಮಾರಸ್ವಾಮಿ ಅವರು ನನ್ನ ಹೆಸರು ಹೇಳಲಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಜೋಡೋ ಸಭಾಂಗಣದಲ್ಲಿ ಇಂದು ನಡೆದ ಜೆಡಿಎಸ್ ಪಕ್ಷದ ಮಾಜಿ ಶಾಸಕ ಗೌರಿಶಂಕರ್ ಮತ್ತು ಮಂಜುನಾಥ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ 40 ಜನ ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಅನ್ನುವ ಕುಮಾರಸ್ವಾಮಿ, ಇನ್ನೊಂದೆಡೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಪಕ್ಷದ 19 ಶಾಸಕರ ಬೆಂಬಲ ನೀಡುತ್ತೇವೆ ಅನ್ನುತ್ತಾರೆ. ಅವರ ಮಾತು ಕೇಳಲು ನಾವೇನು ದಡ್ಡರೇ? ಎಂದು ಹೇಳಿದರು.
ಸರ್ಕಾರಕ್ಕೆ ನಮ್ಮ ಪಕ್ಷದ 136 ಜನ ಶಾಸಕರು ಮತ್ತು ಪಕ್ಷೇತರರ ಬೆಂಬಲವಿದೆ. ಕುಮಾರಸ್ವಾಮಿ ಅವರೇ ಎನ್ ಡಿಎಯಿಂದ ಮೊದಲು ಹೊರಬನ್ನಿ, ಒಬ್ಬ ವ್ಯಕ್ತಿಗೆ ಸ್ಪಷ್ಟವಾದ ರಾಜಕೀಯ ನಿಲುವು ಇರಬೇಕು ಎಂದ ಅವರು, ಕುಮಾರಸ್ವಾಮಿ ಅವರ ದ್ವಂದ್ವ ನಿಲುವು ಅರ್ಥವಾಗುತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಸೇರಿದ್ದಾರೆ, ತೆಲಂಗಾಣದಲ್ಲಿ ಕೆಸಿಆರ್ ಪರ ಮಾತನಾಡುವರು. ಕೆಸಿಆರ್ ಅವರ ಮಗ ಮೋದಿ ಅವರನ್ನು ಸುಳ್ಳ ಎಂದು ಕರೆಯುತ್ತಾರೆ. 18 ಜನ ಶಾಸಕರನ್ನು ಕರೆದುಕೊಂಡು, ಅವರನ್ನು ಖುರ್ಚಿಯಿಂದ ಇಳಿಸಿದವರ ಜತೆಗೆ ಮಿಲನವಾಗಿದ್ದೇವೆ, ಸಂಸಾರ ನಡೆಸುತ್ತೇವೆ ಎಂದರೆ ಸಿದ್ದಾಂತ ಎನ್ನುವುದು ಎಲ್ಲಿಗೆ ಹೋಯಿತು? ಎಂದು ಪ್ರಶ್ನೆ ಮಾಡಿದರು.
ಸರ್ಕಾರ ಬೀಳಿಸಿದವರೊಂದಿಗೆ ಜೆಡಿಎಸ್ ನೆಂಟಸ್ಥನ: ಜೆಡಿಎಸ್ ಜಾತ್ಯತೀತ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟ ಪಕ್ಷ ಎನ್ನುವ ಕಾರಣಕ್ಕೆ 80 ಜನ ಕಾಂಗ್ರೆಸ್ ಶಾಸಕರು ಇದ್ದರೂ 30 ಸ್ಥಾನ ಗೆದ್ದಂತಹ ಅವರ ಪಕ್ಷಕ್ಕೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಈಗ ಸರ್ಕಾರ ಬೀಳಿಸಿದವರ ಜೊತೆ ಅವರು ನೆಂಟಸ್ಥನ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಶಾಸಕರಾದ ನರೇಂದ್ರಸ್ವಾಮಿ, ನೆಲಮಂಗಲ ಶ್ರೀನಿವಾಸಯ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಕೆ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂಓದಿ:ಎಸ್ ಟಿ ಸೋಮಶೇಖರ್ ಎಂದರೆ ನಮಗೆ ವಿಶೇಷ: ಗೃಹ ಸಚಿವ ಜಿ ಪರಮೇಶ್ವರ್