ಬೆಂಗಳೂರು : ಇವರು ಅಶ್ವತ್ಥನಾರಾಯಣ್ ಅಲ್ಲ. ನವರಂಗಿ ನಾರಾಯಣ. ಕಳ್ಳರನ್ನು ರಕ್ಷಣೆ ಮಾಡುವಲ್ಲಿ ಇವರು ಡಾಕ್ಟರೇಟ್ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಾಮನಗರ ಕ್ಲೀನ್ ಮಾಡುತ್ತೇನೆ ಎಂದು ಬಂದವರು, ಜಿಲ್ಲೆಯಲ್ಲಿ ಅವರ ಪಕ್ಷವನ್ನೇ ಕ್ಲೀನ್ ಮಾಡಿದರು. ಆ ಮಾನಸಿಕ ಖಿನ್ನತೆಯಲ್ಲಿ ಅವರಿದ್ದಾರೆ. ಅಶ್ವತ್ಥನಾರಾಯಣ್ ಅವರು ತಮ್ಮ ಇಲಾಖೆಯಲ್ಲಿ ಹಾಗೂ ಬೆಂಗಳೂರಿನಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬ ವಿಚಾರವನ್ನು ಬಿಚ್ಚಿಟ್ಟಿಲ್ಲ. ಈ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಅವರ ಎಲ್ಲಾ ಅಕ್ರಮಗಳನ್ನು ಬಿಚ್ಚಿಡುತ್ತೇವೆ ಎಂದರು.
ಅಶ್ವತ್ಥನಾರಾಯಣ್ ಅವರಿಗೆ ಪ್ರಾಮಾಣಿಕ ಗುತ್ತಿಗೆದಾರರ ರಕ್ಷಣೆ ಬಗ್ಗೆ ಚಿಂತೆ ಇಲ್ಲ. ಇದ್ದಿದ್ದರೆ ಅವರ ಕಾಲದಲ್ಲೇ ಬಿಲ್ ಪಾವತಿ ಮಾಡುತ್ತಿದ್ದರು. ಈಗ ತಮ್ಮದೇ ಆದ ಕೆಲವು ಬಿಜೆಪಿ ಗುತ್ತಿಗೆದಾರರನ್ನು ಎತ್ತಿ ಕಟ್ಟಿ ನಕಲಿ ಗುತ್ತಿಗೆದಾರರು, ಬೇನಾಮಿ ಕಳ್ಳರ ರಕ್ಷಣೆಗೆ ನಿಂತಿದ್ದಾರೆ. ಅಶ್ವತ್ಥನಾರಾಯಣ್ ಕೃಪಾಪೋಷಿತ ನಾಟಕ ಮಂಡಳಿ ಆಟ ಜಾಸ್ತಿ ದಿನ ನಡೆಯಲ್ಲ.
ಯಾರು ಎಷ್ಟು ಕೆಲಸ ಮಾಡಿದ್ದಾರೆ? ಹೇಗೆ ಮಾಡಿದ್ದಾರೆ? ಯಾರು ಯಾರನ್ನು ಹೇಗೆ ಎತ್ತಿಕಟ್ಟುತ್ತಿದ್ದಾರೆ? ಎಂಬುದು ಬಯಲಾಗಲಿದೆ. ಪ್ರಾಮಾಣಿಕ ಗುತ್ತಿಗೆದಾರರ ರಕ್ಷಣೆಗೆಂದೇ ಪ್ರಾಥಮಿಕ ತನಿಖೆ ಮಾಡಲೇಬೇಕು. ಅದನ್ನು ಸರ್ಕಾರ ಮಾಡುತ್ತಿದೆ. ಇದನ್ನು ತಪ್ಪಿಸಲು ಅವರು ಇಷ್ಟೆಲ್ಲಾ ಆಟವಾಡುತ್ತಿದ್ದಾರೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ಏನು ಬೇಕಾದರೂ ಮಾಡಲಿ. ರಾಜ್ಯಪಾಲರಿಗೆ ಮಾತ್ರವಲ್ಲ ರಾಷ್ಟ್ರಪತಿ ಬಳಿಗೂ ಹೋಗಲಿ. ಯಾವುದೇ ಅಭಿಯಾನ ಮಾಡಲಿ. ನಾನು ಈ ವಿಚಾರವಾಗಿ ಮೊನ್ನೆಯೇ ಮಾತನಾಡಬೇಕಿತ್ತು. ಆದರೆ ಬಿಬಿಎಂಪಿ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿತು. ಇಂದು ಪಕ್ಷದ ಸಭೆ ಇದೆ. ನಾಳೆ ಸ್ವಾತಂತ್ರ್ಯ ದಿನಾಚರಣೆ ಇದೆ. ಹೀಗಾಗಿ ಈಗ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದು ಡಿಸಿಎಂ ಹೇಳಿದರು.
ಗುತ್ತಿಗೆದಾರರ ವಿಚಾರ : ಒತ್ತಡದಿಂದಾಗಿ ಕೆಲವು ಗುತ್ತಿಗೆದಾರರು ನಿಮ್ಮ ವಿರುದ್ಧ ಮಾತನಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಅದು ಸತ್ಯ. ನಾನು ಯಾರಿಗೂ ಗುತ್ತಿಗೆಯನ್ನೇ ನೀಡಿಲ್ಲ. ಹೀಗಿರುವಾಗ ನಾನು ಕಮಿಷನ್ ಕೇಳಲು ಹೇಗೆ ಸಾಧ್ಯ? ಗುತ್ತಿಗೆದಾರರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸಗಳ ಬಿಲ್ ಪಾವತಿ ಬಗ್ಗೆ ಮನವಿ ಮಾಡಲು ನನ್ನನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಯಾಕೆ ಈ ಗುತ್ತಿಗೆದಾರರ ಬಿಲ್ ಪಾವತಿ ಮಾಡಲಿಲ್ಲ?
ಮುಂದೆ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಬಗ್ಗೆ ಅಘಾತಕಾರಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಬಿಜೆಪಿ ನಾಯಕರು ಗುತ್ತಿಗೆದಾರರನ್ನು ಹೇಗೆಲ್ಲಾ ಬಳಸಿಕೊಂಡು, ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂಬುದನ್ನು ನೋಡಿದರೆ ಬೇಸರವಾಗುತ್ತದೆ ಎಂದ ಡಿಸಿಎಂ ಅವರಿಗೆ ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡುವ ಸಿ ಟಿ ರವಿ ಅವರ ಹೇಳಿಕೆ ವಿಚಾರದ ಬಗ್ಗೆ ಕೇಳಿದಾಗ ಸಿ ಟಿ ರವಿಗೂ ಉತ್ತಮ ಚಿಕಿತ್ಸೆ ಬೇಕಿದೆ ಎಂದರು.
ಪ್ರತಿಪಕ್ಷಗಳಿಗೆ ಹೊಟ್ಟೆ ಉರಿ : ಪ್ರತಿಪಕ್ಷಗಳು ನಮಗೆ ಅಧಿಕಾರ ಸಿಕ್ಕಿಲ್ಲವೆಂದು ಹಾಗೂ ಪಂಚ ಗ್ಯಾರಂಟಿ ಯೋಜನೆ ಜಾರಿಯಿಂದ ಹೊಟ್ಟೆ ಉರಿದುಕೊಂಡು ಕೈಹಿಚುಕಿ ಹಿಚುಕಿ ಸಾಯುತ್ತಿದ್ದಾರೆ ಎಂದು ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಅಕ್ಬರ್-ಬೀರಬಲ್ಲ ನಡುವಿನ ಗಲಾಟೆ ಕಥೆ ಹೇಳುತ್ತಾ ಪ್ರತಿಪಕ್ಷಗಳ ಕಾಲೆಳೆದರು. ಅಂಗೈಯಲ್ಲಿ ಕೂದಲು ಏಕಿಲ್ಲ ಅಂತ ಬೀರಬಲ್ಲನನ್ನು ಅಕ್ಬರ್ ಕೇಳುತ್ತಾನೆ. ಆಗ ಬೀರಬಲ್ಲ ನೀವು ದೊಡ್ಡ ದಾನಿಗಳು, ಹಾಗಾಗಿ ದಾನ ಕೊಟ್ಟು ಕೊಟ್ಟು ನಿಮ್ಮ ಕೈಯಲ್ಲಿ ಕೂದಲು ಹೋಗಿದೆ ಅಂತಾನೆ. ದಾನ ಇಸ್ಕೊಂಡು ಇಸ್ಕೊಂಡು ನನ್ನ ಕೈ ಕೂದಲು ಬಿದ್ದು ಹೋಗಿದೆ ಅಂತಾನೆ. ಹಾಗಿದ್ದರೆ ಸಭಿಕರದ್ದು ಏಕೆ ಕೈಯಲ್ಲಿ ಕೂದಲು ಇಲ್ಲ ಎಂದು ಅಕ್ಬರ್ ಕೇಳುತ್ತಾನೆ. ಆಗ ಬೀರಬಲ್ಲ, ಅವರಿಗೆ ನಮಗೆ ಏನೂ ಸಿಕ್ಕಿಲ್ಲ ಅಂತ ಕೈ ಹಿಚುಕಿ ಹಿಚುಕಿ ಅವರ ಕೈ ಕೂದಲು ಬಿದ್ದು ಹೋಗಿದೆ ಅಂತಾನೆ. ಪ್ರತಿಪಕ್ಷಗಳು ನಮಗೆ ಅಧಿಕಾರ ಸಿಕ್ಕಿಲ್ವಲ್ಲಾ, ಪಂಚ ಗ್ಯಾರಂಟಿ ಜಾರಿಯಿಂದ ಹೊಟ್ಟೆ ಉರಿಯಿಂದ ಕೈ ಹಿಚುಕಿ ಹಿಚುಕಿ ಸಾಯುತ್ತಿದ್ದಾರೆ ಎಂದು ಡಿಕೆಶಿ ಟೀಕಿಸಿದರು.
ಕರ್ನಾಟಕದ ಮಾಡೆಲ್ : ನೀವೆಲ್ಲಾ ನಾಯಕರು ಶ್ರಮ, ಒಗ್ಗಟ್ಟಿನಿಂದ, ವೇದಿಕೆ ಮೇಲಿರುವ ಎಲ್ಲರ ಐಕ್ಯತೆಯಿಂದ ಹಾಗೂ ನಮ್ಮ ನಿಮ್ಮೆಲ್ಲರ ಶ್ರಮಕ್ಕೆ ಅಪರೂಪದ ಫಲಿತಾಂಶ ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲನ್ನು ಮುಚ್ಚಿದ್ದೇವೆ. ಯೋಗ ಬರುತ್ತೆ. ಯೋಗಕ್ಕಿಂತ ಯೋಗಕ್ಷೇಮ ಹೆಚ್ಚು. ಆ ಯೋಗವನ್ನು ಕಾಪಾಡಿಕೊಂಡು ಹೋಗಬೇಕು. ಜನರ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ನಾವಿಬ್ಬರು ಒಪ್ಪಿ ಕೆಲಸ ಮಾಡುತ್ತಿದ್ದೇವೆ. ಟೀಂ ವರ್ಕ್ ಆಗಿ ಕೆಲಸ ಮಾಡಿದ್ದೇವೆ. ಎಲ್ಲಿ ಹೋದರು ಕರ್ನಾಟಕದ ಮಾಡೆಲ್ ಮಾಡಬೇಕು ಎಂದು ದೇಶಾದ್ಯಂತ ಕೈ ನಾಯಕರು ವರಿಷ್ಠರನ್ನು ಕೇಳುತ್ತಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ಹೆಚ್ಚು ಸಂಸದ ಸ್ಥಾನ ಗೆಲ್ಲಿಸುವ ಕೆಲಸ : ಈ ಹಿಂದೆ ನಿಮಗೂ ನಿದ್ದೆ ಮಾಡಲು ಬಿಡಲ್ಲ ನಾನು ನಿದ್ದೆ ಮಾಡಲ್ಲ ಎಂದಿದ್ದೆ. ಆಗ ಕೆಲವರು ಟೀಕೆ ಮಾಡಿದರು. ಆದರೆ 90% ಪಕ್ಷದ ಜನ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಕೆಲವರು ಹಳೆ ಪದ್ಧತಿಯಂತೆ ಕೆಲಸ ಮಾಡಬೇಕು ಎಂಬ ಭಾವನೆಯಲ್ಲಿದ್ದರು. ವಿಧಾನಸೌಧದ ಮೂರನೇ ಮಹಡಿ ಕೊಂಡೊಯ್ದ ಕೂಡಲೇ ಇಲ್ಲಿಗೆ ನಮ್ಮ ಕೆಲಸ ಮುಗಿತು ಅಂತ ಅಲ್ಲ. ಇಡೀ ದೇಶ ನಮ್ಮನ್ನು ನೋಡುತ್ತಿದೆ. ನಮಗೆ ದೊಡ್ಡ ಸವಾಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಎಲ್ಲರೂ ಕರ್ನಾಟಕದ ಫಲಿತಾಂಶದ ಬಗ್ಗೆ ಮಾತನಾಡುತ್ತಿದ್ದಾರೆ. ಅನೇಕ ನಾಯಕರುಗಳಿಗೆ ನಮಗೇನು ಸಿಕ್ತು ಎಂಬ ಭಾವನೆ ಇದೆ. ಬರೀ 30 ಜನಕ್ಕೆ ಮಾತ್ರ ಅಧಿಕಾರ ಸಿಕ್ಕಿದೆ. ನಮಗೆ ಏನೂ ಇಲ್ಲ ಎಂಬ ಭಾವನೆ ಇದೆ. ನಾವು ಎಲ್ಲವನ್ನೂ ಸರಿ ಮಾಡಿದ್ದೇವೆ ಎನ್ನಲ್ಲ ಎಂದರು.
ಬಂಡಾಯದಿಂದ 15 ಸೀಟ್ ಸೋತಿದ್ದೇವೆ. ಪಕ್ಷ ಆ ಬಗ್ಗೆ ತೀರ್ಮಾನ ಮಾಡಲಿದೆ. ನಾವು ಎಲ್ಲಾ ಸೀಟು ಗೆಲ್ಲುತ್ತೇವೆ ಎಂಬ ಅತಿ ವಿಶ್ವಾಸ ಬೇಡ. ನಾವು ಹೆಚ್ಚಿಗೆ ಶ್ರಮ ವಹಿಸಿ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಹೆಚ್ಚು ಸಂಸದ ಸ್ಥಾನ ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ. ಒಗ್ಗಟ್ಟಿನಿಂದ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಇಂಧನ ಇಲಾಖೆ ಹಾಗೂ ಸಹಕಾರ ಇಲಾಖೆಯಲ್ಲೂ ಕೈ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲು ಸೂಚಿಸಿದ್ದೇವೆ. ನಾವಷ್ಟೇ ಅಧಿಕಾರದಲ್ಲಿರುವುದಲ್ಲ ನಿಮಗೂ ಅಧಿಕಾರ ನೀಡುತ್ತೇವೆ.
ನಾವು ನಮ್ಮ ಬೂತ್ನಲ್ಲಿ, ವಾರ್ಡ್ನಲ್ಲಿ ಗೆಲ್ಲದಿದ್ದರೆ ಪ್ರಯೋಜನ ಇಲ್ಲ. ಶಕ್ತಿ ಯೋಜನೆ ಸಾಕಷ್ಟು ಶಕ್ತಿ ನೀಡಿದೆ. ಬೇರೆ ರಾಜ್ಯದ ಇತರ ಪಕ್ಷದ ನಾಯಕರುಗಳು ನಿಮ್ಮ ಪಂಚ ಗ್ಯಾರಂಟಿ ಅನುಷ್ಠಾನದಿಂದ ನಮ್ಮ ಮೇಲೆ ಒತ್ತಡ ತಂದಿದ್ದೀರ ಎಂದು ಹೇಳುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆ ತಲುಪಿದೆಯಾ ಎಂದು ಜನರ ಮನೆಗೆ ಹೋಗಿ ಮಾತನಾಡಬೇಕು. ಆ ಹೊಣೆಯನ್ನು ನಿಮಗೆ ಮುಂದೆ ನೀಡುತ್ತೇನೆ. ಮನೆ ಮನೆಗೆ ಹೋಗಿ ಪಂಚ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಡಿಸಿಎಂ ಕರೆ ನೀಡಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯತ್, ಪಾಲಿಕೆ ಚುನಾವಣೆ ನಮ್ಮ ಮುಂದಿನ ಸವಾಲಾಗಿದೆ. ಕೋರ್ಟ್ ಮಾರ್ಗದರ್ಶನ ಕೊಡುವಂತೆ ನಾವು ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ. ಕೆಲವರು ಲೋಕಸಭೆ ಚುನಾವಣೆ ಬಳಿಕ ಮಾಡಿ ಅಂತಿದ್ದಾರೆ. ಆದರೆ, ನಾವು ಮಾತ್ರ ಚುನಾವಣೆ ನಡೆಸಲು ತಯಾರಾಗಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಸಿದ್ಧರಾಗಿರಬೇಕು. ರಾಹುಲ್ ಗಾಂಧಿ ಐರನ್ ಲೆಗ್ ಎಂದು ಬಹಳ ಟೀಕೆ ಮಾಡುತ್ತಿದ್ದರು. ಆದರೆ ರಾಜ್ಯದಲ್ಲಿ ಅವರು ಎಲ್ಲೆಲ್ಲಿ ಹೆಜ್ಜೆ ಹಾಕಿದ್ದಾರೆ, ಅಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ. ನಾಯಕತ್ವ ಮತ್ತು ನಿಮ್ಮಿಂದ ನಾವು ಗೆದ್ದಿದ್ದೇವೆ. ನಿಮ್ಮ ಶ್ರಮದಿಂದ ಈ ಫಲ ಸಿಕ್ಕಿದೆ. ತಾಳ್ಮೆಯಿಂದ ಇರಬೇಕು ಎಂದು ನುಡಿದರು.
ನವರಂಗಿದೂ ಗೊತ್ತಿದೆ, ಸಾಮ್ರಾಟನದ್ದೂ ಗೊತ್ತಿದೆ:
ಕೆಪಿಸಿಸಿ ಕಚೇರಿಯಲ್ಲಿ ಗುತ್ತಿಗೆದಾರರ ಯು ಟರ್ನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ, ನಾನು ಗುತ್ತಿಗೆದಾರರ ಬಗ್ಗೆ ಮಾತಾಡಲ್ಲ. ಅವರನ್ನ ಬಿಡಿ, ಅವರು ಕಷ್ಟದಲ್ಲಿ ಇದ್ದಾರೆ. ಆದರೆ ಅವರನ್ನು ಬಳಸಿಕೊಂಡ ನವರಂಗಿ ನಾರಾಯಣ, ಅದ್ಯಾವುದೋ ರವಿ, ಮಹಾಲಕ್ಷ್ಮಿ ಲೇಔಟ್ ಗೋಪಾಲಸ್ವಾಮಿ ಬಗ್ಗೆ ಮಾತಾಡಬೇಕಿದೆ. ಒಬ್ಬೊಬ್ಬರಾಗಿ ನನ್ನ ಹತ್ತಿರ ಬರುತ್ತಾ ಇದ್ದಾರೆ. ಮುನಿರತ್ನ ಬಂದು ಏನೇನೋ ಹೇಳಿಕೊಂಡರು. ಚಿಕ್ಕಪೇಟೆ ಶಾಸಕರು ಬಂದು ಅವರದ್ದು ಏನೇನೂ ಮಾತನಾಡಿದ್ರು ಎಂದು ತಿಳಿಸಿದರು. ನವರಂಗಿದೂ ಗೊತ್ತಿದೆ, ಸಾಮ್ರಾಟನದ್ದೂ ಗೊತ್ತಿದೆ. ನಮ್ಮ ಅಜ್ಜಯ್ಯನ ಸಹವಾಸ ಇವರಿಗೆಲ್ಲ ಗೊತ್ತಿಲ್ಲ. ಒಂದೇ ದಿನ ಎಲ್ಲ ದಾಖಲೆ ಬಿಡುಗಡೆ ಬೇಡ. ಒಂದೇ ದಿನಕ್ಕೆ ಎಕ್ಸಾಸ್ಟ್ ಆಗಿದ್ದಾರೆ ಇನ್ನಷ್ಟು ಎಕ್ಸಾಸ್ಟ್ ಆಗಲಿ ಎಂದು ಇದೇ ವೇಳೆ ತಿರುಗೇಟು ನೀಡಿದರು
ಇದನ್ನೂ ಓದಿ : ಅಧಿಕಾರಕ್ಕೆ ಬಂದ ಕೂಡಲೇ ಬದಲಾಗಿರುವ ನೀವು ನವರಂಗಿಗಳು, ಮೊದಲು ಡಿಕೆಶಿಯನ್ನು ಸಂಪುಟದಿಂದ ವಜಾಗೊಳಿಸಿ: ಅಶ್ವತ್ಥನಾರಾಯಣ್