ಬೆಂಗಳೂರು: ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ನಮ್ಮ ವ್ಯವಸ್ಥೆ ಮೇಲೆ ಭರವಸೆ ಇಟ್ಟು ಪ್ರತಿಭಟನೆ ಹಿಂಪಡೆಯಿರಿ ಎಂದು ವೈದ್ಯರಿಗೆ ವೈದ್ಯಕೀಯ ಸಚಿವರೂ ಆಗಿರುವ ಡಿಸಿಎಂ ಅಶ್ವತ್ಥ್ ನಾರಾಯಣ್ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೆಡಿಕಲ್ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ವೈದ್ಯಕೀಯ ವಿದ್ಯಾರ್ಥಿಗಳ ಜೊತೆಗೆ ನಾವಿದ್ದೇವೆ. ರೋಗಿಗಳ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಳ್ಳಲು ಕಾರಣರಾದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ವೈದ್ಯರ ಹಿತ ಕಾಪಾಡುವುದಲ್ಲದೆ, ಹಲ್ಲೆ ಮಾಡಿದ ಸಂಘಟನೆ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಎಸ್ಮಾ ಜಾರಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ಮೊದಲು ಪ್ರತಿಭಟನಾಕಾರರು ಹೋರಾಟ ಹಿಂಪಡೆಯಬೇಕು ಎಂದು ವೈದ್ಯ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದೇನೆ. ತಿಳುವಳಿಕೆ ಇಲ್ಲದೆ ಕೆಲವು ವ್ಯಕ್ತಿಗಳು ಪ್ರಚೋದನೆ ಮಾಡುತ್ತಿದ್ದಾರೆ. ಯಾರೇ ಪ್ರಚೋದನೆ ಮಾಡಿದರೂ ಅದಕ್ಕೆ ಕಿವಿಗೊಡಬೇಡಿ ಎಂದು ಡಿಸಿಎಂ ಮನವಿ ಮಾಡಿದರು.