ಬೆಂಗಳೂರು: ಪ್ರಸಕ್ತ ಹತ್ತು ವರ್ಷಗಳ ಅವಧಿಯ ಪ್ರಾಥಮಿಕ ಶಿಕ್ಷಣವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ 15 ವರ್ಷಗಳ ಅವಧಿಗೆ ಹೆಚ್ಚಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಬೆಂಗಳೂರಿನ ಸದಾಶಿವಗರದಲ್ಲಿ ಇಂದು ಕಲಬುರಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈವರೆಗೆ ಸರ್ಕಾರಿ ಶಾಲೆಗಳಲ್ಲಿ ಮಗುವಿನ ಆರನೇ ವರ್ಷದಿಂದ ಪ್ರಾಥಮಿಕ ಶಿಕ್ಷಣ ಕಲಿಕೆ ಆರಂಭವಾಗುತ್ತಿತ್ತು. ಶಿಕ್ಷಣ ನೀತಿ ಜಾರಿಗೆ ಬಂದ ನಂತರ ಮಗುವಿನ 3ನೇ ವರ್ಷದಿಂದ ಪ್ರಾಥಮಿಕ ಶಿಕ್ಷಣ ಶುರುವಾಗುತ್ತದೆ ಎಂದರು.
ಓದಿ: ರಾಜ್ಯದಲ್ಲಿಂದು 792 ಮಂದಿಗೆ ಕೊರೊನಾ: 2 ಸೋಂಕಿತರು ಬಲಿ
ಬಹುತೇಕ ಮುಂದುವರಿದ ದೇಶಗಳಲ್ಲಿ ಮಗುವಿನ 3ನೇ ವರ್ಷದಿಂದಲೇ ಕಲಿಕೆ ಆರಂಭವಾಗುತ್ತಿದೆ. ಅಷ್ಟೇ ಏಕೆ ನಮ್ಮ ದೇಶದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಇದೇ ವ್ಯವಸ್ಥೆಯನ್ನು ಕಾಣಬಹುದು. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಮಕ್ಕಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಅದೆಲ್ಲವನ್ನೂ ವೈಜ್ಞಾನಿಕವಾಗಿ ಸರಿ ಮಾಡುವ ನಿಟ್ಟಿನಲ್ಲಿ ಸರ್ವ ಸಮಾನವಾಗಿ ಮಗುವಿನ 3ನೇ ವಯಸ್ಸಿನಿಂದಲೇ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರ ನೀಡಲಿದೆ ಎಂದು ಡಿಸಿಎಂ ಹೇಳಿದರು.
ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಅದರ ಮೂಲಕ ಉತ್ತಮ ಫಲಿತಾಂಶವನ್ನು ಸಾಧಿಸಬೇಕಾದರೆ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವನ್ನು ಕೊಡಲೇಬೇಕು ಎಂದು ಪ್ರತಿಪಾದಿಸಿದರು. ಅತ್ಯುತ್ತಮ ವಿದ್ಯಾರ್ಥಿಯನ್ನು ರೂಪಿಸಿದಾಗ ಮಾತ್ರ ಅತ್ಯುತ್ತಮ ಫಲಿತಾಂಶ ಸಿಗುತ್ತದೆ. ಈ ಹಿನ್ನೆಲೆ ಕಲಿಕೆಯ ಆರಂಭದಿಂದಲೂ ಮಕ್ಕಳ ನಡುವೆ ತಾರತಮ್ಯವಿಲ್ಲದೆ ಎಲ್ಲರಿಗೂ ಉತ್ತಮ, ಸಮಾನ ಶಿಕ್ಷಣವನ್ನು ನೀಡಬೇಕು. ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವಾಗಿದೆ ಎಂದರು.
ಸಮಾಜ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಏಕೈಕ ಪರಿಹಾರವೆಂದರೆ ಶಿಕ್ಷಣ ಮಾತ್ರ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲೇಬೇಕು. ಸಾಮಾಜಿಕ, ಆರ್ಥಿಕ ಸೇರಿದಂತೆ ವಿವಿಧ ರೀತಿಯ ಸವಾಲುಗಳನ್ನು ಶಿಕ್ಷಣದಿಂದ ಮಾತ್ರ ಎದುರಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗುತ್ತಿವೆ. ಶಿಕ್ಷಣಕ್ಕೆ ಶಕ್ತಿ ತುಂಬದ ಹೊರತು ದೇಶಕ್ಕೆ ಶಕ್ತಿ ತುಂಬಲು ಸಾಧ್ಯವಿಲ್ಲ ಎಂದರು.
ಇಡೀ ದೇಶದಲ್ಲಿಯೇ ಮೊದಲಿಗೆ ವೃತ್ತಿ ಶಿಕ್ಷಣದ ಮಹತ್ವವನ್ನು ಅರಿತುಕೊಂಡ ರಾಜ್ಯ ಕರ್ನಾಟಕ. ಇವತ್ತು ಬೆಂಗಳೂರು ಎಷ್ಟು ಬೆಳೆದಿದೆಯೋ, ರಾಜ್ಯವೆಷ್ಟು ಉನ್ನತ ಸಾಧನೆ ಮಾಡಿದೆಯೋ ಅದಕ್ಕೆ ಇಂಥ ವೃತ್ತಿಪರ ಶಿಕ್ಷಣ ಸಂಸ್ಥೆಗಳು ನೀಡಿರುವ ಕೊಡುಗೆಯೇ ಕಾರಣ. ಈಗಂತೂ ಮಾರುಕಟ್ಟೆ ಹಾಗೂ ಉದ್ಯೋಗ ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ, ಸಮಕಾಲೀನ ಸವಾಲುಗಳಿಗೆ ಚಿಕಿತ್ಸಕ ಶಕ್ತಿ ಇರುವಂಥ ಶಿಕ್ಷಣ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಗಳು ಆಗುತ್ತಿವೆ ಎಂದು ಡಾ. ಅಶ್ವತ್ಥ ನಾರಾಯಣ ಹೇಳಿದರು.
ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ. ಭೀಮಾಶಂಕರ ಬಿಲಿಗುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.