ಬೆಂಗಳೂರು: ಉಪ ಚುನಾವಣೆಗೂ ಡಿಕೆಶಿ ಮೇಲಿನ ಸಿಬಿಐ ದಾಳಿಗೂ ಯಾವುದೇ ಸಂಬಂಧ ಇಲ್ಲ. ಈ ಕಾರಣ ಹೇಳಿ ಲಾಭ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಡಿಕೆಶಿ ಮೇಲಿನ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಈಗಾಗಲೇ ಐಟಿ, ಇಡಿ, ಸಿಬಿಐ ತನಿಖಾ ಸಂಸ್ಥೆಗಳಿಂದ ತನಿಖೆ ಎದುರಿಸುತ್ತಿದ್ದಾರೆ. ಐಟಿ, ಇಡಿಯ ಮುಂದುವರೆದ ಭಾಗವಾಗಿ ಈ ಸಿಬಿಐ ದಾಳಿ ಆಗಿದೆ. ಇದು ರಾಜಕೀಯ ಪ್ರೇರಿತ ಅಲ್ಲ. ಸಮಾಜದಲ್ಲಿ ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯ. ಇದರಲ್ಲಿ ನಂಬಿಕೆ ಬರುವ ರೀತಿಯಲ್ಲಿ ತನಿಖೆ ಆಗುತ್ತಿದೆ ಎಂದರು.
ನ್ಯಾಯ, ಸತ್ಯ ಹೊರಗೆ ಬರಬೇಕು. ಇಲ್ಲಿ ವ್ಯಕ್ತಿ ದೊಡ್ಡವರಲ್ಲ. ಡಿಕೆಶಿ ಅವರೇ ತನಿಖೆಗೆ ಸಹಕಾರ ಕೊಡ್ತೀನಿ ಅಂತ ಹೇಳಿದ್ದಾರೆ. ಪ್ರಾಮಾಣಿಕತೆ ಸಾಬೀತು ಮಾಡಲು ಇದೊಂದು ಅವಕಾಶ ಎಂದರು.
ಈ ದಾಳಿಯ ಸಂದರ್ಭದಲ್ಲಿ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೆಲವರು ಅಡ್ವಾಂಟೇಜ್ ತೆಗೆದುಕೊಳ್ಳುತ್ತಿದ್ದಾರೆ. ಇವರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಉಪ ಚುನಾವಣೆಗೂ ದಾಳಿಗೂ ಸಂಬಂಧ ಕಲ್ಪಿಸುವುದು ಬೇಡ ಎಂದರು.