ಬೆಂಗಳೂರು: ಕಾಂಗ್ರೆಸ್ ನಾಯಕರು ವಿಧಾನ ಮಂಡಲ ಅಧಿವೇಶನದ ಬಗ್ಗೆ ಚರ್ಚೆ ನಡೆಸಿದ್ರು ಅಷ್ಟೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾರು ಯಾರ ಬಗೆಗೂ ದೂರು ಕೊಟ್ಟಿಲ್ಲ. ಕೊಟ್ಟಿದ್ದರೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದೆ. ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದಾರಾ ಅಂತ ಕೇಳಿದ್ರು, ಕೊಟ್ಟಿದ್ದಾರೆ ಅಂತಾ ಹೇಳಿದ್ದೇನೆ ಅಷ್ಟೆ. ನನ್ನ ಯಾರು ಅಪಾಯಿಂಟ್ಮೆಂಟ್ ಕೇಳಿಲ್ಲ. ನೀವೆ ಕೇಳ್ತಿರೋದು. ಇದಕ್ಕಾಗಿ ನೂರಾರು ಕಿ.ಮೀ. ದೂರದಿಂದ ದಿನವೂ ಬರುತ್ತಿದ್ದೇನೆ. ಹುಶಾರಿಲ್ಲದಂತೆ ಆಗಿದೆ ಎಂದರು.
ಅಲ್ಲಿ ಇಲ್ಲಿ ರಾಜೀನಾಮೆ ಕೊಡ್ತೀನಿ ಅಂತ ದಾರಿ ತಪ್ಪಿರೋರಿರಿಗೆ ನನ್ ಬಳಿ ಕರ್ಕೊಂಡ್ ಬನ್ನಿ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೆ ವ್ಯಂಗ್ಯವಾಡಿದ ಅವರು, ರಮೇಶ್ ಜಾರಕಿಹೊಳಿ ನನ್ನನ್ನು ಸಂಪರ್ಕಿಸಿಲ್ಲ. ರಾಜೀನಾಮೆ ನನಗೆ ಕೊಟ್ಟಿಲ್ಲ ಎಂದರು. ಶಾಸಕರು ರಾಜೀನಾಮೆ ವದಂತಿ ಬರ್ತಿದೆಯಲ್ಲ ಅನ್ನೋ ಪ್ರಶ್ನೆಗೆ, ಮಾಡೋದಕ್ಕೆ ಕೆಲಸ ಇಲ್ಲದಿರೋರು ರಾಜೀನಾಮೆ ಕೊಡ್ತೀನಿ ಅಂತಾರೆ. ಇದು ಗೌರವಸ್ಥರು ಮಾಡುವ ಕೆಲಸ ಅಲ್ಲ. ರಾಜಕಾರಣದಲ್ಲಿ ಗುಮಾನಿ, ಗುಟ್ಟು ಇರಬಾರದು. ಗುಟ್ಟಾಗಿ ಗುಮಾನಿಯಾಗಿ ಏನೇ ಮಾಡಿದರೂ ಅದು ವ್ಯಾಪಾರ ಆಗುತ್ತೆ. ವ್ಯಾಪಾರಸ್ಥರು ವ್ಯಾಪಾರ ಮಾಡ್ತಾರೆ. ನಾನು ಪ್ರಜಾತಾಂತ್ರಿಕ ವ್ಯವಸ್ಥೆಯನ್ವಯ ಕೆಲಸ ಮಾಡ್ತೀನಿ ಎಂದರು.
ಯಡಿಯೂರಪ್ಪ ಆಪರೇಷನ್ ಕಮಲ ಆಡಿಯೋ ಬಗ್ಗೆ ಎಸ್ಐಟಿ ರಚನೆ ವಿಳಂಬ ವಿಚಾರ ಮಾತನಾಡಿ, ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ, ಸೂಕ್ತ ವೇದಿಕೆಯಲ್ಲಿ ಮಾತಾಡ್ತೀನಿ. ನಾನು ಸ್ಪೀಕರ್, ನನಗೆ ಕೆಲವೊಂದು ನಿರ್ಬಂಧಗಳಿವೆ. ನನಗೆ ಮಾತಾಡುವ ಸ್ವಾತಂತ್ರ್ಯ ಇಲ್ಲ. ನನಗೆ ಬೇರೆಯವರ ಹಾಗೆ ಮಾತಾಡೋಕೆ ಬರಲ್ಲ. ಸ್ಪೀಕರ್ ಆಗಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೊಡೋದಕ್ಕೆ ಆಗೋದಿಲ್ಲ ಎಂದರು.
ಸ್ಪೀಕರ್ ಭೇಟಿ ಬಳಿಕ ಮಾತನಾಡಿದ ಶಾಸಕ ಸಿ.ಟಿ.ರವಿ, ಜು. 12ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನ, ಹಾಸನ ಕ್ಷೇತ್ರದ ಶಾಸಕರ ಸಮಸ್ಯೆ ಕುರಿತು ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ಅವರ ಸಲಹೆ ಪರಿಗಣಿಸದಿರುವುದರ ಬಗ್ಗೆ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಸ್ಪೀಕರ್ ಜತೆ ಮಾತನಾಡಿದೆವು. ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ನನ್ನದೊಂದು ಹಕ್ಕುಚ್ಯುತಿ ಇತ್ತು, ಅದರ ಬಗೆಗೂ ಮಾತನಾಡಿದ್ದೇನೆ ಎಂದರು.
ವಿಧಾನಸಭೆ ಅಧಿವೇಶನವನ್ನು ಯಾವ ರೀತಿ ಅರ್ಥಪೂರ್ಣವಾಗಿ ಮಾಡಬೇಕೆಂಬ ಕುರಿತು ಅವರು ಸಲಹೆ ನೀಡಿದ್ದಾರೆ. ಜನರ ಸಮಸ್ಯೆಗೆ ಸಂಬಂಧಿಸಿದಂತೆ ಯಾವ ರೀತಿ ಸ್ಪಂದಿಸಬೇಕು, ಹೇಗೆ ಸಮಸ್ಯೆಗಳನ್ನು ಮುಂದಿಡಬೇಕು ಎಂಬ ಕುರಿತು ವಿವರಿಸಿದ್ದಾರೆ. ರಮೇಶ್ ಕುಮಾರ್ ಅವರು ಪಕ್ಷಭೇದ ಮರೆತು ರಚನಾತ್ಮಕ ಸಲಹೆಗಳನ್ನು ಪ್ರತಿಯೊಬ್ಬರಿಗೂ ನೀಡುತ್ತಾರೆ. ಕಳೆದ 16-17 ವರ್ಷದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವರ ಮಾರ್ಗದರ್ಶನ ಪಡೆಯುತ್ತಿದ್ದೇನೆ ಎಂದರು.