ಬೆಂಗಳೂರು: ತಮ್ಮ ಊರುಗಳಿಗೆ ವಾಪಸಾಗಲು ನೋಂದಣಿ ಮಾಡಿಸಿಕೊಳ್ಳಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಮಾಯಿಸಿದ್ದ ಹೊರ ರಾಜ್ಯಗಳ ವಲಸಿಗರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ಆಲಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೋಂದಣಿಗಾಗಿ ಬಂದವರಿಗೆ ಊಟ, ಉಪಹಾರ, ನೀರನ್ನು ಸಹ ಸರ್ಕಾರ ನೀಡುತ್ತಿಲ್ಲ. ನಮಗೆ ಸರ್ಕಾರ ಪರವಾನಗಿ ನೀಡಿದರೆ ಸಾಕು ಒಂದೇ ನಿಮಿಷದಲ್ಲಿ ಇವರಿಗೆ ಆಹಾರದ ವ್ಯವಸ್ಥೆ ಮಾಡುತ್ತೇನೆ ಎಂದರು.
ಅರಮನೆ ಮೈದಾನದಲ್ಲಿ ಕಷ್ಟದಲ್ಲಿರುವ ಜನರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ಬೆಳಿಗ್ಗೆ 6 ಗಂಟೆಯಿಂದ ಕ್ಯೂನಲ್ಲಿ ನಿಂತ ಇವರಿಗೆ ಊಟ, ತಿಂಡಿ, ನೀರು ಸಹ ಕೊಡುವವರಿಲ್ಲ. ಈಗಲೂ ಸರ್ಕಾರ ನಮಗೆ ಅನುಮತಿ ನೀಡಿದರೆ ಸಾಕು, ಒಂದು ನಿಮಿಷ ವಿಳಂಬ ಮಾಡದೆ ಈ 20 ಸಾವಿರ ಜನರಿಗೆ ಹಣ ನೀಡಲು ಸಿದ್ಧನಿದ್ದೇನೆ. ರೈಲು, ಬಸ್, ವಿಮಾನದಲ್ಲಿ ತೆರಳುವುದಾದರೆ ಅವರ ಖರ್ಚನ್ನು ನೀಡಿ, ಅವರನ್ನು ಊರಿಗೆ ಕಳುಹಿಸುವ ಕೆಲಸ ಮಾಡುತ್ತೇನೆ ಎಂದರು.
ನಾಡನ್ನು ಕಟ್ಟಲು ಸಹಕಾರ ನೀಡಿದ ಇವರುಗಳಿಗೆ ಸಹಾಯ ಮಾಡುವುದು ಸರ್ಕಾರದ ಹೊಣೆ. ಆದರೆ ಸರ್ಕಾರ ಈ ನಿಟ್ಟನಲ್ಲಿ ಯಾವುದೇ ಕೆಲಸ ಮಾಡದಿರುವುದು ತುಂಬಾ ಬೇಸರದ ಸಂಗತಿ ಎಂದು ಡಿಕೆಶಿ ಹೇಳಿದರು.