ಬೆಂಗಳೂರು: ಹಣ್ಣು ತಿಂದವನು ಯಾವನೋ?, ಸಿಪ್ಪೆ ತಿಂದವನು ಯಾವನೋ? ಬಾಯಿ-ಮೂತಿಗೆ ಒರೆಸಿದವನು ಯಾವನೋ ಎಂದು ಬಿಜೆಪಿ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President D. K. Shivakumar) ಟಾಂಗ್ ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರನ್ನು ಡ್ಯಾಮೇಜ್ ಮಾಡಲು ನೋಡ್ತಾ ಇದ್ದಾರೆ. ಆದರೆ, ಯಾರನ್ನೂ ಡ್ಯಾಮೇಜ್ ಮಾಡಲು ಸಾಧ್ಯವಿಲ್ಲ. ನಮಗೂ ಮಾಹಿತಿ ಇದೆ. ಸೂಕ್ತ ಸಮಯದಲ್ಲಿ ಮಾತನಾಡುತ್ತೇವೆ ಎಂದರು.
ಕಾಂಗ್ರೆಸ್ ನಾಯಕರ ಮಕ್ಕಳು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗಿದ್ದರೆ ಕಾಯುವುದು ಏಕೆ?, ಕೂಡಲೇ ಬಂಧಿಸಿ. ಸಮಯ ಏಕೆ ವ್ಯಯ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಸಿಎಂ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಏತಕ್ಕೆ ಹೋದರೋ ಗೊತ್ತಿಲ್ಲ. ಅವರ ಪಕ್ಷದ ಸಚಿವರುಗಳೇ ಸಿಎಂ ಬಗ್ಗೆ ಹೇಳ್ತಿದ್ದಾರೆ. ಅದರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಬಿಟ್‌ಕಾಯಿನ್ ಪ್ರಕರಣದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಂತ ಪ್ರಧಾನಿ ಹೇಳಿದ್ದಾರೆಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ. ಹಾಗಿದ್ದರೆ ಸಿಎಂ ಪ್ರಧಾನಿ ಮುಂದೆ ಏಕೆ ವಿಷಯ ಪ್ರಸ್ತಾಪಿಸಿದರು?. ಯಾರಿಗಾದರೂ ತೊಂದರೆ ಆಗಿತ್ತಾ?. ಹಗರಣದಲ್ಲಿ ವಿಚಾರ ಏನಿದೆ ಅಂತ ಸಿಎಂ ಬಿಚ್ಚಿಡಲಿ. ಹೇಳೋದು ಉಳಿದದ್ದು, ಹೇಳದೇ ಇರೋದು ಮಾಡಬಾರದು. ಏನಿದೆ ಎಂಬ ವಿಚಾರವನ್ನು ಜನರ ಮುಂದೆ ಬಿಚ್ಚಿಡಲಿ. ಜನರಿಗೆ ಸತ್ಯಾಂಶ ಗೊತ್ತಾಗಬೇಕು ಎಂದು ತಿಳಿಸಿದರು.
ಪ್ರಕರಣದಲ್ಲಿ ಹೊರದೇಶದವರಿಂದ ಏನಾದರೂ ಮಧ್ಯಪ್ರವೇಶ ಇದೆಯಾ?. ಹೊರದೇಶದವರ ಹಣ ಏನಾದರೂ ಹೋಗಿದೆಯಾ?. ಬಿಟ್ ಕಾಯಿನ್ ಬಗ್ಗೆ ಏಕೆ ಆರೋಪ ಪಟ್ಟಿ ಸಲ್ಲಿಸಿದರು?. ಈ ಬಗ್ಗೆ ಯಾವುದೇ ವಿವರ ಕೊಡುತ್ತಿಲ್ಲ. ಕೆಲವು ವಿಚಾರಗಳನ್ನು ಮಾತ್ರ ಮಾಧ್ಯಮದವರಿಗೆ ಸೋರಿಕೆ ಮಾಡುತ್ತಿದ್ದಾರೆ. ಹೀಗಾಗಿ, ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ.
ಸಚಿನ್ ಮಾಮನಿ ಪತ್ರ ಬಿಡುಗಡೆಯಾಗಿದ್ದಲ್ಲಿ ಅದರಲ್ಲಿರುವ ಹೆಸರುಗಳ ಬಗ್ಗೆ ಬಿಜೆಪಿ ಏಕೆ ಮಾತನಾಡುತ್ತಿಲ್ಲ?. ಸಿಎಂ ಮತ್ತು ಗೃಹ ಸಚಿವರು ಪತ್ರದ ಬಗ್ಗೆ ಏಕೆ ಮಾತನಾಡುತ್ತಿಲ್ಲ?. ಪತ್ರದಲ್ಲಿ ಹಲವು ಅಧಿಕಾರಿಗಳು ಸೇರಿದಂತೆ ಕೆಲವರ ಹೆಸರು ಉಲ್ಲೇಖ ಮಾಡಿದ್ದಾರೆ. ಅದು ಸತ್ಯನೋ ಸುಳ್ಳೋ ಅನ್ನೋದು ಗೊತ್ತಿಲ್ಲ. ಅದರ ಬಗ್ಗೆ ತನಿಖೆ ಆಗಬೇಕು ಎಂದರು.
ರೈತರ ಹೋರಾಟ ರೈತರ ಹಕ್ಕು:
ಬೆಳಗಾವಿ ಆತ್ಮಹತ್ಯೆ ಯತ್ನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೈತರ ಹೋರಾಟ ರೈತರ ಹಕ್ಕು. ಜಮೀನು ಕಳೆದುಕೊಂಡವರು ಅದನ್ನು ಉಳಿಸಿಕೊಳ್ಳಬೇಕು. ಪಿತ್ರಾರ್ಜಿತವಾಗಿ ಬಂದ ಜಮೀನನ್ನು ಯಾರೂ ಬಿಟ್ಟು ಕೊಡಲು ಸಿದ್ಧರಿರುವುದಿಲ್ಲ.
ಅವರನ್ನು ಮನವೊಲಿಸಬೇಕು. ಅವರಿಗೆ ಪರಿಹಾರ ನೀಡಿ ಗೌರವಯುತವಾಗಿ ನಡೆಸಿಕೊಳ್ಳಬೇಕು. ಈ ರೀತಿ ಸೀರೆ ಎಳೆದು ಹಾಕುವುದು ಸರಿಯಲ್ಲ. ಪೊಲೀಸರ ದೌರ್ಜನ್ಯ ಹೆಚ್ಚಾಗುತ್ತಿದೆ. ಇದು ಖಂಡನೀಯ. ರೈತರ ಜೊತೆ ಗೌರವಯುತವಾಗಿ ನಡೆದುಕೊಳ್ಳಬೇಕು. ರಕ್ಷಣೆ ಮಾಡಬೇಕು. ತಾಳ್ಮೆಯಿಂದ ಅವರ ಜೊತೆ ಮಾತನಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಟ್ ಕಾಯಿನ್ ತನಿಖೆ ಮಾಡಿದರೆ ಕಾಂಗ್ರೆಸ್‌ನವರೇ ಸಿಕ್ಕಿ ಬೀಳ್ತಾರೆ: ಸಂಸದ ಪ್ರತಾಪ್ ಸಿಂಹ