ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆಯ ಆರೋಪಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.
ಬಸವೇಶ್ವರನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಡಿಕೆಶಿ ಜೊತೆಗೆ ಸಂಪತ್ ರಾಜ್ ವೇದಿಕೆ ಹಂಚಿಕೊಂಡಿದ್ದಾರೆ. ಜೈಲುವಾಸ ಅನುಭವಿಸಿ ಸದ್ಯ ಜಾಮೀನಿನಲ್ಲಿರುವ ಆರೋಪಿಯ ಜೊತೆಗೆ ಕಾರ್ಯಕ್ರಮ ದಲ್ಲಿ ಡಿಕೆಶಿ ಭಾಗಿಯಾಗಿರುವುದು ಹಲವರ ಹುಬ್ಬೇರಿಸಿದೆ.
ಕಾರ್ಯಕ್ರಮದ ವೇದಿಕೆಯಲ್ಲಿ ಆರೋಪಿತರಾದ ಸಂಪತ್ ರಾಜ್ ಜೊತೆಗೆ ದೀಪ ಬೆಳಗಿಸಿದ್ದಾರೆ. ಕಾರ್ಯಕ್ರಮದಲ್ಲಿ ದಿಢೀರ್ ಅಂತ ಮಾಜಿ ಮೇಯರ್ ಸಂಪತ್ ರಾಜ್ ಪ್ರತ್ಯಕ್ಷರಾಗಿದ್ದಾರೆ. ಕಾಂಗ್ರೆಸ್ನಿಂದ ಉಚ್ಚಾಟನೆ ಮಾಡಿ ಅಂತ ಈಗಾಗಲೇ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ದಂಬಾಲು ಬಿದ್ದಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿಯ ಒತ್ತಾಯದ ನಡುವೆಯೂ ಆರೋಪಿತ ಸಂಪತ್ ರಾಜ್ ಜೊತೆಗೆ ಡಿಕೆಶಿ ವೇದಿಕೆ ಹಂಚಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ಡಿ.ಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆಯಲ್ಲಿ ಸಂಪತ್ ರಾಜ್ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಜೈಲಿನಿಂದ ಹೊರ ಬಂದ ಮೇಲೆ ಕಾರ್ಯಕ್ರಮಗಳಿಂದ ಸಂಪತ್ ರಾಜ್ ದೂರ ಉಳಿದಿದ್ದರು. ಆದರೆ ಇಂದು ಡಿಕೆಶಿ ಅಧ್ಯಕ್ಷರಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಆಯೋಜಿಸಲಾಯಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಪ್ರತ್ಯೇಕ್ಷರಾಗಿ ವೇದಿಕೆ ಹಂಚಿಕೊಂಡಿರುವುದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ.