ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಜನರಿಗರ ವಂಚನೆ ಮಾಡುತ್ತಿದ್ದು, ಈ ಬಾರಿ ಖದೀಮರು ಫೇಸ್ಬುಕ್ ಮೂಲಕ ಜನರಿಗೆ ವಂಚಿಸಲು ಮುಂದಾಗಿದ್ದಾರೆ.
ಸೈಬರ್ ಖದೀಮರು ಫೇಸ್ಬುಕ್ನಲ್ಲಿ ಸ್ನೇಹಿತರು ಮತ್ತು ಸಂಬಂಧಿಕರ ಐಡಿ ಹ್ಯಾಕ್ ಮಾಡಿ, ಅದೇ ರಿತಿ ಇನ್ನೊಂದು ಅಕೌಂಟ್ ಕ್ರಿಯೇಟ್ ಮಾಡಿ ಸಂಕಷ್ಟದಲ್ಲಿದ್ದೇವೆ, ಹಣ ಕಳುಹಿಸಿ ಎಂದು ಸಂಬಂಧಿಕರು ಹಾಗೂ ಸ್ನೇಹಿತರ ಫೇಸ್ಬುಕ್ ಖಾತೆಯಿಂದ ಮೆಸೇಜ್ ಮಾಡುತ್ತಿದ್ದಾರೆ.
ಈ ಬಾರಿ ಸೈಬರ್ ಖದೀಮರು ಫೇಸ್ಬುಕ್ನಲ್ಲಿ ಮೊದಲು ವ್ಯಕ್ತಿಯ ಪ್ರೊಫೈಲ್ ಚೆಕ್ ಮಾಡುತ್ತಾರೆ. ತದ ನಂತರ ಯಾವುದಾದರೂ ಸ್ನೇಹಿತರ ಫೋಟೊ ಇರುವ ಖಾತೆಯನ್ನು ನಕಲಿ ಮಾಡಿಕೊಂಡು ಹಣ ಬೇಕು, ಸಂಕಷ್ಟದಲ್ಲಿದ್ದೇನೆಂದು ಮೆಸೇಜ್ ಕಳುಹಿಸುತ್ತಾರೆ. ಸದ್ಯ ಹಲವಾರು ಜನರ ನಕಲಿ ಖಾತೆ ಸೃಷ್ಟಿಸಿ, ನಿಜವಾದ ಖಾತೆ ಎಂದು ನಂಬಿಸಲು ಮಾಹಿತಿ ಹ್ಯಾಕ್ ಮಾಡಿ ಕಂಪನಿ, ಜನ್ಮ ದಿನಾಂಕ, ಶಾಲೆ ಮಾಹಿತಿ, ಕೆಲಸ ವಿಚಾರ ಎಲ್ಲವನ್ನೂ ನಮೂದಿಸಿ ಅರಿವಿಗೆ ಬಾರದಂತೆ ನಕಲಿ ಖಾತೆ ಸೃಷ್ಟಿಸಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ನಂತರ ಹಣ ಬೇಕು, ನನ್ನ ತಂದೆಗೆ ಹುಷಾರಿಲ್ಲ ಎಂದು, ಈಗ ನಿನ್ನ ಜೊತೆ ಮಾತನಾಡಲು ಆಗಲ್ಲ. ನಂತರ ಕರೆ ಮಾಡುತ್ತೇನೆ. ಹಣ ಕಳುಹಿಸು ಎಂದು ಮೆಸೇಜ್ ಮಾಡುತ್ತಾರೆ. ನೀವೇನಾದರು ಖಚಿತ ಮಾಹಿತಿ ಪಡೆಯದೆ ಹಣ ರವಾನಿಸಿದರೆ ಸೈಬರ್ ಕಳ್ಳರ ಪಾಲಾಗುತ್ತೆ.
ಈ ಕುರಿತು ಸೈಬರ್ ಕ್ರೈಂನಲ್ಲಿ 6 ಕೇಸ್ಗಳು ದಾಖಲಾಗಿವೆ. ಕುಂದನಹಳ್ಳಿ ನಿವಾಸಿ ಅಮರ್ಥ ಎಂಬುವವರಿಗೆ ಇದೇ ರೀತಿ ಮೆಸೇಜ್ ಬಂದಿದೆ. ಅಮೆರಿಕದಲ್ಲಿರುವ ಅವರ ಸ್ನೇಹಿತ ಶ್ರೀನಿವಾಸ್ ಫೋಟೊ ಇದ್ದ ಫೇಸ್ಬುಕ್ನಿಂದ ಮೆಸೇಜ್ ಬಂದಿದ್ದು, ತನಗೆ ಹುಷಾರಿಲ್ಲವೆಂದು ಸೈಬರ್ ಖದೀಮರು ಹೇಳಿದ್ದಾರೆ. ಕೂಡಲೇ 3 ಲಕ್ಷ ಹಣ ಬೇಕೆಂದು ಮೆಸೇಜ್ ಹಾಕಿದ್ದಾರೆ. ಇದನ್ನು ನಂಬಿ ಬ್ಯಾಂಕ್ ನಂಬರ್ ಕಳುಹಿಸು ಎಂದು ಹೇಳಿದ್ದಾರೆ. ನಂತರ ಅಮರ್ಥ 1 ಲಕ್ಷ ಹಣ ಕಳುಹಿಸಿದ್ದಾರೆ. ತದ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಮಾವನ ಹೆಸರಿನಲ್ಲಿ ಮೋಸ: ಬೆಳ್ಳಂದೂರಿನ ನಿವಾಸಿ ಅಶೋಕ್ ಸಿಂಗ್ಗೆ ಮಾವ ಬಾಲಸಿಂಗ್ ಹೆಸರಲ್ಲಿ ಫೇಸ್ಬುಕ್ ಖಾತೆ ಮೂಲಕ ಮೆಸೇಜ್ ಬಂದಿದೆ. ಹೀಗಾಗಿ ಮಾವನೇ ಇರಬೇಕು ಎಂದು ಹಣ ಕಳುಹಿಸಿ ನಂತರ ಮಾವನ ನಂಬರ್ಗೆ ಕರೆ ಮಾಡಿದಾಗ ವಿಷಯ ಗೊತ್ತಾಗಿದೆ. ಸದ್ಯ ನಗರದಲ್ಲಿ ಒಟ್ಟು 6 ಪ್ರಕರಣ ದಾಖಲಾಗಿದ್ದು, ಈ ರೀತಿ ಸೈಬರ್ ಖದೀಮರು ರಿಕ್ವೆಸ್ಟ್ ಕಳುಹಿಸಿ ಹಣ ದೋಚುತ್ತಿದ್ದಾರೆ.
ಸದ್ಯ ಫೇಸ್ಬುಕ್, ಇನ್ಸ್ಟಾಗ್ರಾಂ ಬಳಕೆ ಮಾಡುವವರು ಚಾಟ್ ಮಾಡುವ ಮುನ್ನ ಬಹಳ ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ನಿಮ್ಮ ಹಣ ಸೈಬರ್ ಕಳ್ಳರ ಪಾಲಾಗುತ್ತದೆ.