ಬೆಂಗಳೂರು : ತಂತ್ರಜ್ಞಾನ ಮುಂದುವರೆದಷ್ಟು ಸೈಬರ್ ವಂಚಕರ ಹೊಸ ಹೊಸ ತಂತ್ರಗಳು ಬಯಲಾಗುತ್ತಿವೆ. ನೀವೇನಾದರೂ ಪರಿಶೀಲಿಸಿ ಕಳುಹಿಸಿದ ಕೊರಿಯರ್ ಬಗ್ಗೆ ಆಕ್ಷೇಪಾರ್ಹವಾಗಿ ಯಾರಾದರೂ ಕರೆ ಮಾಡಿದ್ರೆ, ನಂಬುವ ಮುನ್ನ ಎಚ್ಚರ ವಹಿಸಿ. ವಿದೇಶಕ್ಕೆ ಕಳುಹಿಸಿದ್ದ ಕೊರಿಯರ್ನಲ್ಲಿ ಮಾದಕ ಪದಾರ್ಥ ಪತ್ತೆಯಾಗಿದೆ ಎಂದು ಬೆದರಿಸುವ ಸೈಬರ್ ವಂಚಕರು, ಮುಂಬೈ ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿರುವ ನಿದರ್ಶನಗಳು ಬೆಳಕಿಗೆ ಬಂದಿವೆ.
ಈ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕೋಮಲ್ ಎಂಬುವರಿಗೆ ಜನವರಿ 6ರಂದು ಕರೆ ಮಾಡಿದ್ದ ಸೈಬರ್ ವಂಚಕರು, ಮೊದಲು ತಾವು ಕೊರಿಯರ್ ಕಂಪನಿಯವರು, ನೀವು ತೈವಾನ್ಗೆ ಕಳುಹಿಸಿದ್ದ ಕೊರಿಯರ್ನಲ್ಲಿ ಗಾಂಜಾ ಹಾಗೂ ಹಣ ಪತ್ತೆಯಾಗಿದೆ ಎಂದು ಹೆದರಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ತಾವು ಮುಂಬೈ ಪೊಲೀಸರೆಂದು ಹೇಳಿಕೊಂಡು ಕರೆ ಮಾಡಿದ್ದ ಅದೇ ಖದೀಮರು, 'ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದೆ, ಇಲ್ಲವಾದಲ್ಲಿ ಹಣ ಪಾವತಿಸಬೇಕು ಎಂದು ಹೇಳಿ 1.50 ಲಕ್ಷ ರೂಪಾಯಿಯನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣ ಬೆಳಕಿಗೆ: ಕೋಮಲ್ ಅವರಿಗೆ ಬೆದರಿಸಿದ ಮಾದರಿಯಲ್ಲಿಯೇ ಡಿಸೆಂಬರ್ 15 ರಂದು ಪೂಜಾ ಎಂಬಾಕೆಗೆ ಸಹ ಕರೆ ಮಾಡಿದ್ದ ಆರೋಪಿಗಳು, 67 ಸಾವಿರ ರೂ ವರ್ಗಾಯಿಸಿಕೊಂಡಿರುವುದು ನಡೆದಿದೆ. ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಈ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಶರವೇಗದಲ್ಲಿ ನಡೀತಿದೆ ಸೈಬರ್ ಕ್ರೈಮ್: ಪತ್ತೆ ಹಚ್ಚೋದ್ರಲ್ಲಿ ಪೊಲೀಸರು ಹಿಂದೆ ಹಿಂದೆ!
ತಂತ್ರಜ್ಞಾನದ ದುರ್ಬಳಕೆ: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ತಂತ್ರಜ್ಞಾನದ ದುರ್ಬಳಕೆ ಪ್ರಮಾಣವೂ ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ಶರವೇಗದಲ್ಲಿ ಸೈಬರ್ ಅಪರಾಧಗಳು ಒಂದೇ ಸಮನೆ ಏರಿಕೆ ಆಗುತ್ತಿವೆ. ಬ್ಯಾಂಕಿಂಗ್, ಸೈಬರ್ ವಂಚನೆಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಅಗ್ರಸ್ಥಾನದಲ್ಲಿವೆ ಎಂದು ಕಳೆದ ವರ್ಷ ಸರ್ಕಾರದ ವರದಿಗಳು ಉಲ್ಲೇಖಿಸಿವೆ. 2021ರಲ್ಲಿ (ಏಪ್ರಿಲ್-ಡಿಸೆಂಬರ್) ನಡೆದ ಪ್ರಕರಣಗಳ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ಹಂಚಿಕೊಂಡಿತ್ತು. ಈ ವೇಳೆ ದೇಶದಲ್ಲಿ ಸುಮಾರು 50,242 ಪ್ರಕರಣಗಳು ದಾಖಲಾಗಿದ್ದವು. ಕೇವಲ 9 ತಿಂಗಳಲ್ಲಿ ಗ್ರಾಹಕರು ಸುಮಾರು 167 ಕೋಟಿ ರೂಪಾಯಿ ಕಳೆದುಕೊಂಡಿದ್ದರು. 2021ರಲ್ಲಿ ಕರ್ನಾಟಕದಲ್ಲಿ 2,397 ವಂಚನೆ ಕೇಸ್ಗಳು ದಾಖಲಾಗಿದ್ದವು.
ಇದನ್ನೂ ಓದಿ: ಕರೆಂಟ್ ಬಿಲ್ ಪಾವತಿಸಿಲ್ಲವೆಂದು ವೃದ್ಧೆಯಿಂದ 28 ಲಕ್ಷ ರೂ ದೋಚಿದ ಖದೀಮರು
ಸೈಬರ್ ಕ್ರೈಂ ನಿಯಂತ್ರಣ ಕ್ರಮಗಳು: ಕೇಂದ್ರ ಹಾಗೂ ರಾಜ್ಯದಲ್ಲಿ ಸೈಬರ್ ಕ್ರೈಂ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು. ಸೈಬರ್ ಕ್ರೈಂ ಕುರಿತಂತೆ ಪೊಲೀಸರಿಗೆ ಸೂಕ್ತ ತರಬೇತಿ ನೀಡಬೇಕು. ವಿದೇಶಗಳಲ್ಲಿ ಸೈಬರ್ ಬಗ್ಗೆ ಇರುವ ಕಠಿಣ ಕಾನೂನು ಜಾರಿಗೆ ತರಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇದನ್ನೂ ಓದಿ: ಬ್ಯಾಂಕಿಂಗ್, ಸೈಬರ್ ವಂಚನೆ ಕೇಸ್ಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿಗೆ ಅಗ್ರಸ್ಥಾನ..