ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದೇ ಒಂದು ಸೈಬರ್ ಠಾಣೆ ಇರುವ ಹಿನ್ನೆಲೆ ನಗರದ ಎಲ್ಲ ಡಿಸಿಪಿಗಳ ವಲಯದಲ್ಲಿ ಒಟ್ಟು ಎಂಟು ಸೆಲ್ ಸೈಬರ್ ಠಾಣೆಗಳನ್ನ ತೆರೆಯಲಾಗಿದ್ದು, ಪ್ರತೀ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೈಬರ್ ಅಪರಾಧ ಪ್ರಕರಣಗಳು ಕಡಿಮೆಯಾಗಿದೆ.
ಪ್ರತೀ ವರ್ಷ ಸಿಲಿಕಾನ್ ಸಿಟಿಯಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಯಾವುದೋ ನಗರ, ದೇಶದಲ್ಲಿ ಸೈಬರ್ ಖದೀಮರು ಕೂತು ಸಾರ್ವಜನಿಕರ ಬ್ಯಾಂಕ್ ಖಾತೆಗೆ ಕನ್ನ ಹಾಕೋದು ಎಟಿಂಎಂ ಹಣ ಎಗರಿಸೋದು, ಮ್ಯಾಟ್ರಿಮೊನಿಯಲ್ ದೋಖಾ, ಹೀಗೆ ವರ್ಷದಲ್ಲಿ ಸುಮಾರು 7ಸಾವಿರದಿಂದ 8 ಸಾವಿರದವರೆಗೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಹೀಗಾಗಿ ಬೆಂಗಳೂರು ನಗರದಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದೇ ಒಂದು ಸೈಬರ್ ಠಾಣೆ ಇರುವ ಹಿನ್ನೆಲೆ ನಗರದ ಎಲ್ಲ ಡಿಸಿಪಿಗಳ ವಲಯದಲ್ಲಿ ಒಟ್ಟು ಎಂಟು ಸೆಲ್ ಸೈಬರ್ ಠಾಣೆಗಳನ್ನ ತೆರೆಯಲಾಗಿದ್ದು, ಸದ್ಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿವೆ.
ಮತ್ತೊಂದೆಡೆ ಸದ್ಯ ಲಾಕ್ಡೌನ್ ಆಗಿರುವ ಕಾರಣ ಜನ ಮನೆಯಲ್ಲೇ ಕೂತು ಆನ್ಲೈನ್ ವಹಿವಾಟುಗಳನ್ನ ನಡೆಸ್ತಾರೆ. ಹೀಗಾಗಿ ಕೆಲ ಖದೀಮರು ಸಾಲಗಳ ಕಂತು ಕಟ್ಟೊದನ್ನ ಬಂಡವಾಳವಾಗಿಟ್ಟುಕೊಂಡು ಕರೆ ಮಾಡಿ ಮೋಸ ಮಾಡುವ ಪ್ರಕರಣಗಳು ನಡೆಯುತ್ತವೆ. ಲಾಕ್ಡೌನ್ ಸಂದರ್ಭದಲ್ಲಿ ಸಾಲದ ಕಂತು ವಿಚಾರದಲ್ಲಿ ಫ್ರಾಡ್ಗಳು ಬಿಟ್ಟರೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲವೆಂದು ಹಿರಿಯ ಅಧಿಕಾರಿ ಗಳು ತಿಳಿಸಿದ್ದಾರೆ.
ಈಟಿವಿ ಭಾರತ ಜೊತೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತಾಡಿ, ಪ್ರತೀ ವರ್ಷ 7ಸಾವಿರದಿಂದ 8ಸಾವಿರದವರೆಗೆ ಪ್ರಕರಣಗಳು ದಾಖಲಾಗುತ್ತವೆ. ಲಾಕ್ಡೌನ್ ಆದ ನಂತರ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದು, ಬ್ಯಾಂಕ್ಗಳ ಸಾಲದ ಕಂತುಗಳನ್ನ ಕಟ್ಟಲು ಮೂರು ತಿಂಗಳುಗಳ ಅವಕಾಶ ನೀಡಿದ ಕಾರಣ ಕೆಲವರು ಇದನ್ನೇ ದುರುಪಯೋಗಪಡಿಸಿಕೊಂಡು ಕರೆ ಮಾಡಿ ಹಣ ಎಗರಿಸುವ ಲಕ್ಷಣಗಳು ಹೆಚ್ಚಿದೆ. ಲಾಕ್ಡೌನ್ ಹೇರಿರುವ ಹಿನ್ನೆಲೆ ಬಹಳಷ್ಟು ಜನ ಮನೆಯಲ್ಲಿದ್ದು ಆನ್ಲೈನ್ ವಹಿವಾಟು, ಹೀಗೆ ಹಲವಾರು ಚಟುವಟಿಕೆಯನ್ನ ಮನೆಯಲ್ಲಿಯೇ ಮಾಡುತ್ತಿದ್ದು, ವಹಿವಾಟು ನಡೆಸುವಾಗ ಜಾಗೃತರಾಗಿ ಎಂದು ತಿಳಿಸಿದ್ದಾರೆ