ಬೆಂಗಳೂರು: ಈ ಹಿಂದೆ ಇಸ್ಕಾನ್ ಯೋಜಿಸಿದ್ದ ಕೃಷ್ಣಾ ಥೀಮ್ ಪಾರ್ಕ್ಗೆ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ.ಶಿವಕುಮಾರ್ ಇಂದು ಏಸು ಪ್ರತಿಮೆ ನಿರ್ಮಿಸುವುದು ಸರಿನಾ? ಎಂದು ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಕೊಂಡಚ್ಚಿ ಬಸಪ್ಪ ಸಭಾಂಗಣದಲ್ಲಿ ಮಾತನಾಡಿದ ಅವರು, ಅಂದು ಕೃಷ್ಣನಿಗೆ ಡಿಕೆಶಿ ಯಾಕೆ ವಿರೋಧ ಮಾಡಿದ್ದರು? ಕೃಷ್ಣನಿಗೆ ವಿರೋಧಿಸಿ ಏಸು ಪ್ರತಿಮೆ ನಿರ್ಮಿಸ್ತಿರೋದು ಸರಿನಾ? ಕ್ರಿಸ್ತ ಓಕೆ, ಆದರೆ ಕೃಷ್ಣಗೆ ವಿರೋಧ ಯಾಕೆ? ಡಿಕೆಶಿ ರಾಜಕಾರಣಿಯಾಗಿ ಬುದ್ಧಿವಂತರು. ಇದನ್ನು ವಿರೋಧ ಮಾಡಿದಷ್ಟು ಡಿಕೆಶಿಗೆ ರೊಟ್ಟಿ ತುಪ್ಪಕ್ಕೆ ಜಾರಿ ಬೀಳುತ್ತದೆ. ಅದು ಡಿಕೆಶಿಗೆ ಚೆನ್ನಾಗಿಯೇ ಗೊತ್ತು ಎಂದು ಟಾಂಗ್ ನೀಡಿದರು. ಮೇಲಿನವರ ಕೃಪಾಕಟಾಕ್ಷ ತಮ್ಮ ಮೇಲೆ ಬೀಳಲಿ ಅಂತ ಡಿಕೆಶಿ ಏಸು ಪ್ರತಿಮೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ ಯೋಚನೆ ಮಾಡಿ ಬುದ್ಧಿವಂತಿಕೆಯಿಂದ ಹೀಗೆ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕೆ ಯಾವ ದೇವರನ್ನು ಪ್ರತಿಷ್ಠಾಪಿಸಬೇಕು ಅನ್ನೋದು ಡಿಕೆಶಿಗೆ ಕರಗತವಾಗಿರುವ ವಿದ್ಯೆ ಎಂದು ಟೀಕಿಸಿದರು.
ಜೈಲಿಗೆ ಹೋಗುವ ಮುನ್ನ ಯಾವ ದೇವಸ್ಥಾನಕ್ಕೆ ಹೋಗಬೇಕು? ಜೈಲಿಂದ ಬಂದ ಮೇಲೆ ಯಾವ ದೇವಸ್ಥಾನಕ್ಕೆ ಹೋಗಬೇಕು? ಈ ಕುರಿತು ರಾಜಕಾರಣ ಹೇಗೆ ಮಾಡ್ಬೇಕು ಅನ್ನೋದು ಡಿಕೆಶಿಗೆ ಚೆನ್ನಾಗಿಯೇ ಗೊತ್ತಿದೆ ಎಂದು ಟಾಂಗ್ ನೀಡಿದರು. ಪ್ರತಿಮೆ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ ಇದ್ದರೆ, ಕಾನೂನು ನೋಡಿಕೊಳ್ಳುತ್ತದೆ. ಪ್ರತಿಮೆ ನಿರ್ಮಾಣ ಕುರಿತು ಪಕ್ಷ, ಸರ್ಕಾರ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಮಂಗಳೂರಿಗೆ ಪಶ್ಚಿಮ ಬಂಗಾಳದ ನಿಯೋಗ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕ್ರಿಮಿನಲ್‌ಗಳಿಗೆ ಪರಿಹಾರ ಕೊಡಬಾರದು ಅನ್ನೋದು ನಮ್ಮ ಉದ್ದೇಶ. ಪಶ್ಚಿಮ ಬಂಗಾಳದವರು ರಾಜಕೀಯ ಕಾರಣಕ್ಕೆ ಪರಿಹಾರ ಕೊಟ್ಟಿದ್ದಾರೆ. ಎಲ್ಲವನ್ನೂ ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡುತ್ತಾರೆ ಅವರು. ಇದಕ್ಕೆಲ್ಲ ಜಗ್ಗಲ್ಲ. ಕಾಯ್ದೆ ಜಾರಿ ತಡೆಯಲು ಸಾಧ್ಯವಿಲ್ಲ. ಕಾಯ್ದೆ ವಿರೋಧಕ್ಕೆ ಸಕಾರಣವೂ ಇಲ್ಲ. ಮುಸ್ಲಿಮರಿಗೆ ಒಂದು ದೇಶವನ್ನೇ ಕೊಟ್ಟಿರುವಾಗ ಇಲ್ಲಿ ಪೌರತ್ವ ಯಾಕೆ ಕೊಡಬೇಕು? ಎಂದು ಪ್ರಶ್ನಿಸಿದರು.