ಬೆಂಗಳೂರು: ಕ್ರೈಂ ಪೊಲೀಸ್ ಸಿಬ್ಬಂದಿಗಳೆಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅರುಣ್, ರಾಕೇಶ್ ಹಾಗೂ ಹರೀಶ್ ಬಂಧಿತ ಆರೋಪಿಗಳು. ಕ್ರೈಂ ಪೊಲೀಸ್ ಸೋಗಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯನ್ನು ಆತನ ಹಾಸ್ಟೆಲ್ ನಿಂದ ಕರೆದೊಯ್ದಿದ್ದ ಆರೋಪಿಗಳು, ಆತನನ್ನು ಬೆದರಿಸಿ 1.70 ಲಕ್ಷ ರೂ. ಸುಲಿಗೆ ಮಾಡಿದ್ದರು.
ಆತನ ಹಾಸ್ಟೆಲ್ ನಿಂದ ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು, 'ನಾವು ಕ್ರೈಂ ಪೊಲೀಸ್ ಸಿಬ್ಬಂದಿ, ಮಾದಕ ವಸ್ತು ಪ್ರಕರಣವೊಂದರಲ್ಲಿ ನಿನ್ನ ಹೆಸರು ಕೇಳಿ ಬಂದಿದೆ. ನೀನು ಮಾದಕ ಪದಾರ್ಥ ಸೇವನೆ ಹಾಗೂ ಮಾರಾಟದಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ವೈದ್ಯಕೀಯ ತಪಾಸಣೆ ಮಾಡಬೇಕು' ಎಂದು ಬೆದರಿಸಿದ್ದರು. ಬಳಿಕ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಕಾರಿನಲ್ಲಿ ಸುತ್ತಾಡಿಸಿ ಆತನಿಂದ ಆನ್‌ಲೈನ್ ರೂಪದಲ್ಲಿ 1.70 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದರು. ನಂತರ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಸಿ ಹಾಸ್ಟೆಲ್ ಬಳಿ ತಂದು ಬಿಟ್ಟು ಪರಾರಿಯಾಗಿದ್ದರು.
ಹಣ ಕಳೆದುಕೊಂಡ ವಿದ್ಯಾರ್ಥಿ ಸದಾಶಿವನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು ಆರೋಪಿಗಳ ವಿರುದ್ಧ ಯಶವಂತಪುರ ಠಾಣೆಯಲ್ಲಿಯೂ ಒಂದು ಪ್ರಕರಣ ದಾಖಲಾಗಿದೆ. ಆರೋಪಿಗಳು ಕೆಲವೊಮ್ಮೆ ಪೊಲೀಸ್ ಭಾತ್ಮೀದಾರರಾಗಿಯೂ ಕೆಲಸ ಮಾಡಿದ್ದರು. ಹೀಗಾಗಿ ಕೆಲ ಪೊಲೀಸ್ ಸಿಬ್ಬಂದಿಗಳ ಪರಿಚಯವಿದೆ ಎಂದು ತಿಳಿದುಬಂದಿದೆ.
ಆದರೆ ಆರೋಪಿತರು ಅದನ್ನೇ ಬಂಡವಾಳವನ್ನಾಗಿಸಿಕೊಂಡು ಸುಮಾರು ಹದಿನೈದಕ್ಕೂ ಅಧಿಕ ಸುಲಿಗೆ ಮಾಡಿರುವ ವಿಚಾರ ಸಹ ಬಯಲಾಗಿದೆ. ಸದ್ಯ ಬಂಧಿತ ಆರೋಪಿಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ವೀಲಿಂಗ್ ಮಾಡುತ್ತಿದ್ದ ಯುವಕರು ಪೊಲೀಸರ ಕಂಡು ಪರಾರಿ: ವೀಲಿಂಗ್ನಲ್ಲಿ ತೊಡಗಿದ್ದ ಆರೋಪಿಗಳಿಬ್ಬರು ಸಂಚಾರಿ ಪೊಲೀಸ್ ಸಿಬ್ಬಂದಿ ಕಂಡು ದ್ವಿಚಕ್ರ ವಾಹನ ಬಿಟ್ಟು ಪರಾರಿಯಾದ ಘಟನೆ ಭಾನುವಾರ ಸಂಜೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕೇಗೌಡನಪಾಳ್ಯದ 80 ಫೀಟ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಆರೋಪಿಗಳು ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿದ್ದು, ಅದರಲ್ಲಿ ಒಂದು ಡ್ಯಾಗರ್ ಹಾಗೂ 40 ಗ್ರಾಂ ಗಾಂಜಾ ಪತ್ತೆಯಾಗಿದೆ.
ವೀಲಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಇಬ್ಬರು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಸಂಜೆ ಇಬ್ಬರು ಆರೋಪಿಗಳು ಹೋಂಡಾ ಡಿಯೋದಲ್ಲಿ ಚಿಕ್ಕೇಗೌಡನಪಾಳ್ಯದ 80 ಫೀಟ್ ರಸ್ತೆಯಿಂದ ಚನ್ನಸಂದ್ರ ಮಾರ್ಗವಾಗಿ ಅತಿವೇಗ ಮತ್ತು ಅಪಾಯಕಾರಿಯಾಗಿ ವೀಲಿಂಗ್ ಮಾಡಿಕೊಂಡು ಬರುತ್ತಿರುವುದನ್ನು ಕಂಡ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ನಿಲ್ಲಿಸಲು ಪ್ರಯತ್ನಿಸಿದ್ದರು. ಈ ವೇಳೆ ಇಬ್ಬರೂ ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ಆರೋಪಿಗಳು ಬಿಟ್ಟು ಹೋಗಿದ್ದ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ ಒಂದು ಡ್ಯಾಗರ್ ಮತ್ತು ಸುಮಾರು 40 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಅವುಗಳನ್ನ ತಲಘಟ್ಟಪುರ ಪೊಲೀಸ್ ಠಾಣೆಗೆ ನೀಡಲಾಗಿದ್ದು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಾರಾಂತ್ಯದಲ್ಲಿ ಆಫ್ರಿಕನ್ ಪ್ರಜೆಗಳ ಉಪಟಳ.. ಮಾದಕ ಪದಾರ್ಥ ಮಾರುತ್ತಿದ್ದ ನೈಜೀರಿಯನ್ ಪ್ರಜೆಯ ಬಂಧನ