ಬೆಂಗಳೂರು : ತನ್ನ ಹೆಂಡತಿಯೊಂದಿಗೆ ಫೋನಿನಲ್ಲಿ ಹೆಚ್ಚು ಮಾತನಾಡುತ್ತಾನೆಂದು ಸಂಶಯಪಟ್ಟು ಸಹೋದರ ಸಂಬಂಧಿಯನ್ನು ಹತ್ಯೆಗೈದಿರುವ ಘಟನೆ ಚಿಕ್ಕಜಾಲ ಠಾಣೆ ವ್ಯಾಪ್ತಿ ಶುಕ್ರವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿಹಾರ ಮೂಲದ ಸಂದೀಪ್ ಕುಮಾರ್ ಕೊಲೆಗೀಡಾದ ವ್ಯಕ್ತಿ. ಆರೋಪಿ ಶುಭೋದ್ ಮಂಡಲ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಮೂಲದ ಸಂದೀಪ್ ಕುಮಾರ್ನು, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದನು. ಸಂದೀಪ್ ಕುಮಾರ್ ಚಿಕ್ಕಪ್ಪನ ಮಗ ಶುಭೋದ್ ಮಂಡಲ್ ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದನು. ಈ ವೇಳೆ ತನ್ನ ಊರಿನಲ್ಲಿರುವ ಸಂದೀಪ್ ಪತ್ನಿ ಜೊತೆ ಶುಭೋದ್ ಹೆಚ್ಚಾಗಿ ಫೋನ್‌ನಲ್ಲಿ ಮಾತನಾಡುತಿದ್ದನು. ಇದೇ ಕಾರಣದಿಂದಾಗಿ ಶುಭೋದ್ಗೆ ತನ್ನ ಪತ್ನಿ ಜೊತೆ ಅಕ್ರಮ ಸಂಬಂಧವಿರಬಹುದು ಎಂದು ಸಂದೀಪ್ಗೆ ಶಂಕೆ ಮೂಡಿತ್ತು. ಶುಕ್ರವಾರ ರಾತ್ರಿ ಮದ್ಯಪಾನ ಮಾಡಿದ್ದ ಸಂದೀಪ್ ಹಾಗೂ ಶುಬೋದ್ ನಡುವೆ ಇದೇ ವಿಚಾರಕ್ಕಾಗಿ ಜಗಳ ನಡೆದಿತ್ತು.
ಜಗಳದ ಬಳಿಕ ಮಲಗಿದ್ದ ಸಂದೀಪ್ ಕುಮಾರ್ ಮೇಲೆ ಶುಭೋದ್ ತೀವ್ರವಾಗಿ ಹಲ್ಲೆ ಮಾಡಿದ್ದನು. ತೀವ್ರವಾಗಿ ಗಾಯಗೊಂಡಿದ್ದ ಸಂದೀಪ್ನನ್ನು ಬಿಟ್ಟು ಶುಭೋದ್ ಪರಾರಿಯಾಗಿದ್ದನು. ಮಾರನೇ ದಿನ ರಾತ್ರಿ ಸಂದೀಪ್ನ ಸಹೋದರರು ರೂಮಿಗೆ ಬಂದಾಗ ಆತ ಮೃತಪಟ್ಟಿರುವುದು ಪತ್ತೆಯಾಗಿತ್ತು.
ಬಳಿಕ ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಠಾಣೆಯ ಪೊಲೀಸರು, ನಾಪತ್ತೆಯಾಗಿದ್ದ ಆರೋಪಿ ಶುಭೋದ್ ಮಂಡಲ್ ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ. ಸದ್ಯ ಆರೋಪಿಯ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಉಳ್ಳಾಲ: ಮಹಿಳಾ ಪೇದೆಗೆ ಲೈಂಗಿಕ ಕಿರುಕುಳ ಆರೋಪ.. ನಿವೃತ್ತ ಯೋಧ ಪೊಲೀಸರ ವಶಕ್ಕೆ