ಬೆಂಗಳೂರು: ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜುಲೈ 02ರಂದು ಬೆಳಗಿನ ಜಾವ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪವಿತ್ರಾ ಆತ್ಮಹತ್ಯೆಗೆ ಶರಣಾದ ಮಹಿಳೆ.
ಹೆಗ್ಗನಹಳ್ಳಿ ನಿವಾಸಿಯಾಗಿದ್ದ ಪವಿತ್ರಾಗೆ ಇದು ಎರಡನೇ ಮದುವೆಯಾಗಿತ್ತು. ಮೊದಲ ಪತಿಯೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟಿದ್ದರಿಂದ ಇಬ್ಬರೂ ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದ ಪವಿತ್ರ ಅದೇ ಕಂಪನಿಯ ಮಾಲೀಕನಾಗಿರುವ ಚೇತನ್ ಗೌಡ ಎಂಬುರನ್ನು ಪ್ರೀತಿಸಿ ವಿವಾಹವಾಗಿದ್ದರು.
ತೀವ್ರವಾಗಿ ಮನನೊಂದಿದ್ದ ಪವಿತ್ರಾ, ಜುಲೈ 2ರಂದು ಗಂಡನೊಂದಿಗಿನ ಜಗಳದ ದೃಶ್ಯಗಳು, ಡೆತ್ ನೋಟ್ ಫೋಟೋಗಳನ್ನ ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ಪ್ರಕಟಿಸಿದ್ದರು. ಸ್ಟೇಟಸ್ ನೋಡಿದ್ದ ಪವಿತ್ರಾರ ತಾಯಿ ಮಗಳ ಮನೆಗೆ ಬಂದು ನೋಡಿದಾಗ ಆಕೆ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.
ಸದ್ಯ ಮೃತಳ ತಾಯಿ ಪದ್ಮಮ್ಮ ನೀಡಿರುವ ದೂರಿನನ್ವಯ ಚೇತನ್ ಗೌಡ ಹಾಗೂ ಅವರ ಪ್ರೇಯಸಿಯ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಹಾಗೂ ಮೃತಳ ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಕೆಂಗೇರಿ ಠಾಣಾ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಬೀದಿ ಬದಿ ವ್ಯಾಪಾರಿ ಮೇಲೆ ಹಲ್ಲೆ: ರಾಜಧಾನಿಯಲ್ಲಿ ಮತ್ತೊಂದು ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಬೀದಿ ಬದಿಯಲ್ಲಿ ಸೊಪ್ಪು, ತರಕಾರಿ ಮಾರಾಟ ಮಾಡುತ್ತಿದ್ದ ವೃದ್ಧೆಯ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಶನಿವಾರ ಜಯನಗರದ 26ನೇ ಕ್ರಾಸ್ ನಲ್ಲಿರುವ ಬಾಲಾಜಿ ಮೆಡಿಕಲ್ ಶಾಪ್ ಬಳಿ ನಡೆದಿದೆ. ಪುಂಡರ ಉಪಟಳದಿಂದ ಚಂದ್ರಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಾಲಾಜಿ ಮೆಡಿಕಲ್ ಶಾಫ್ ಮುಂಭಾಗದ ಫುಟ್ ಪಾತ್ ನಲ್ಲಿ ಕಳೆದ ಕೆಲ ವರ್ಷಗಳಿಂದ ಚಂದ್ರಮ್ಮ ಸೊಪ್ಪು, ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ಶನಿವಾರ ಸಂಜೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಚಂದ್ರಮ್ಮರ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಪರಾರಿಯಾಗಿದ್ದಾರೆ. ಪರಿಣಾಮ ಅವರ ತಲೆಗೆ ತೀವ್ರವಾಗಿ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಣಾಪಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.