ಬೆಂಗಳೂರು : ಕೊರೊನಾ 2ನೇ ಅಲೆಯ ತೀವ್ರತೆ ದಿನೇದಿನೆ ಹೆಚ್ಚುತ್ತಿದೆ. ಒಂದೆಡೆ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ, ಇನ್ನೊಂದೆಡೆ ಸೋಂಕಿನಿಂದ ಸಾವಿಗೀಡಾದವರನ್ನ ಸುಡಲು ಜಾಗ ಸಿಗುತ್ತಿಲ್ಲ.
ಇತ್ತ ಸೋಂಕಿತರನ್ನ ಸುಡಲು ಒಂದೆಡೆ ಸಿಬ್ಬಂದಿ ಹೆದರುತ್ತಿದ್ದರೆ, ಮತ್ತೊಂದೆಡೆ ದೇಹ ಸುಟ್ಟ ಹೊಗೆ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟು ಮಾಡುತ್ತಿದೆ.
ಹಾಗಾಗಿ, ನಗರದ ಹರಿಶ್ಚಂದ್ರ ಘಾಟ್ ಚಿತಾಗಾರದ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಬರ್ನಿಂಗ್ ಮಾಡಿದಾಗ ಅದರ ಹೊಗೆ ಮನೆಗಳಿಗೆ ಹೋಗುತ್ತದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾದಿಂದ ಸತ್ತವರ ಮೃತದೇಹಗಳನ್ನ ಸುಡುವುದನ್ನ ನಿಲ್ಲಿಸಬೇಕು ಎಂದು ಸುತ್ತಮುತ್ತಲಿನ ನಿವಾಸಿಗಳು ಆಗ್ರಹಿಸಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಪ್ರತಿಭಟನಾನಿರತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ್ದಾರೆ.
ಚಿತಾಗಾರದಲ್ಲಿಯೂ ರಾಜಕೀಯ ಆಕ್ರೋಶ : ಮತ್ತೊಂದೆಡೆ ಚಿತಾಗಾರದಲ್ಲಿಯೂ ರಾಜಕೀಯ ಶುರುವಾಗಿದ್ದು, ಚಿತಾಗಾರದ ಸಿಬ್ಬಂದಿ ಬಾಗಿಲು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಅಶ್ವತ್ಥ್ ನಾರಾಯಣ್ ಆಪ್ತ ಸಂತೋಷ್ ಚಿತಾಗಾರ ಸಿಬ್ಬಂದಿಗೆ ಆವಾಜ್ ಹಾಕಿದ್ರಂತೆ.
ತಮ್ಮವರ ಮೃತದೇಹ ಮೊದಲು ಸುಡುವಂತೆ ಧಮ್ಕಿ ಹಾಕಿದ್ರಂತೆ. ಇದರಿಂದ ಆಕ್ರೋಶಗೊಂಡ ಚಿತಾಗಾರ ಸಿಬ್ಬಂದಿ ಹರಿಶ್ಚಂದ್ರ ಘಾಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ ಸಾಲಿನಲ್ಲಿ 7 ಆ್ಯಂಬುಲೆನ್ಸ್ ನಿಂತಿದ್ದವು. ಬಾಗಿಲು ಬಂದ್ ಮಾಡಿ ಪ್ರತಿಭಟನೆ ಮಾಡುವ ಮೂಲಕ, ಡಿಸಿಎಂ ಅಶ್ವತ್ಥ್ ನಾರಾಯಣ್ ಸ್ಥಳಕ್ಕೆ ಬಂದು ಸಮಸ್ಯೆ ಪರಿಹಾರ ಮಾಡಬೇಕು. ಹಾಗೇ ಸಂತೋಷ್ ಎಂಬಾತನನ್ನು ಬಂಧಿಸಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.
ಓದಿ: ರಾಜ್ಯ ಸರ್ಕಾರದ ಪಾಪದ ಫಲವನ್ನು ಜನರು ಅನುಭವಿಸಬೇಕಾಗಿರುವುದು ದುರಂತ : ದಿನೇಶ್ ಗುಂಡೂರಾವ್