ಬೆಂಗಳೂರು: ರಾಜ್ಯದಲ್ಲಿ ಇದೇ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭಾನುವಾರ ದೆಹಲಿಯಲ್ಲಿ ಭೇಟಿಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರವು ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಜೈಡಸ್ ಕ್ಯಾಡಿಲಾ ಕಂಪನಿಯೊಂದಿಗೆ ಮಕ್ಕಳಿಗೆ ಕೋವಿಡ್ ಲಸಿಕೆ ಬೆಲೆ ನಿಗದಿ ಕುರಿತಾಗಿ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.
'ರಾಜ್ಯದಲ್ಲಿ ಮೂರನೇ ಅಲೆ ಊಹಿಸಲು ಸಾಧ್ಯವಿಲ್ಲ'
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕೋವಿಡ್ ಮೂರನೇ ಅಲೆ ಹೇಗಿರುತ್ತದೆ ಎಂದು ಕಾದು ನೊಡಬೇಕು. ಆದಾಗ್ಯೂ, ನಾವು ಮೂರನೇ ಅಲೆ ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಕೋವಿಡ್ ಕಠಿಣ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ. ಲಸಿಕೆಯ ಎರಡು ಡೋಸ್ ತೆಗೆದುಕೊಂಡವರಿಗೆ ಬೂಸ್ಟರ್ ಶಾಟ್ ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.